ಕೊಪ್ಪಳ: ಕೇಂದ್ರ ಸರ್ಕಾ ಬಜೆಟ್ನಲ್ಲಿ ರಾಜ್ಯ ಕಡೆಗಣಿಸಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಶನಿವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ರಾಜ್ಯದಿಂದ ಕೇಂದ್ರಕ್ಕೆ ಅಧಿಕ ತೆರಿಗೆ ಹೋಗುತ್ತದೆ. ನ್ಯಾಯಯುತವಾಗಿ ರಾಜ್ಯದ ಅಭಿವೃದ್ಧಿಗೆ ಅನುದಾನ ಒದಗಿಸಬೇಕಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಿಎಂ ಮೊದಲೇ ಮನವಿ ಮಾಡಿದ್ದರು. ಆದರೂ ರಾಜ್ಯ ಕಡೆಗಣಿಸಿದ್ದಾರೆ. ತಮ್ಮ ಖುರ್ಚಿ ಉಳಿಸಿಕೊಳ್ಳಲು ಮಿತ್ರ ಪಕ್ಷಗಳ ರಾಜ್ಯಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಇದು ಸರಿಯಲ್ಲ. ಇದನ್ನು ಲೋಕಸಭೆ ಒಳಗೆ ಖಂಡಿಸುವೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ರಾಜ್ಯದ ಜನ ಪ್ರಧಾನಿ ಮೋದಿ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದ್ದರೂ, ಬಿಜೆಪಿಗೆ ಹೆಚ್ಚು ಸ್ಥಾನ ಬಂದಿವೆ. ಭದ್ರಾ ಯೋಜನೆ ಅನುದಾನ ಮುಂದುವರೆಸಬೇಕಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೂ ಅನುದಾನ ನೀಡಿಲ್ಲ. ನಾವು ಚುನಾವಣೆ ವೇಳೆ ಮತ ಹಾಕಬೇಡಿ ಚೊಂಬು ಕೊಡುತ್ತಾರೆ ಎಂದಿದ್ದೆವು. ಈಗ ಚೊಂಬೇ ಗತಿಯಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, 32 ರಾಜ್ಯ ಹೆದ್ದಾರಿಗಳನ್ನು ಎನ್ಎಚ್ ಮಾಡುವ ಪ್ರಸ್ತಾವನೆ ಇತ್ತು. ಈವರೆಗೂ ಕೇಂದ್ರ ಸರ್ಕಾರ ಲಕ್ಷ್ಯ ವಹಿಸಿಲ್ಲ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅಪಘಾತಗಳು ಹೆಚ್ಚುತ್ತಿವೆ. ಸಮಯ ಹೆಚ್ಚು ಹಾಳಾಗುತ್ತದೆ. ಕಣ್ತೆಗೆದು ಕೊಡುತ್ತಿಲ್ಲ. ಸಾರ್ವಭೌಮತ್ವದ ನಡವಳಿಕೆಯಿಂದ ಕೇಂದ್ರದಲ್ಲಿ ಸೀಟುಗಳು ಕಡಿಮೆ ಆಗಿವೆ. ಸಾರ್ವಭೌಮತ್ವದ ಹಿನ್ನಲೆಯಲ್ಲಿ ಜನರು ತಿರಸ್ಕರಿಸಿದ್ದು, ಇದಕ್ಕೆ ಬೆಂಬಲ ನೀಡಿದ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ ಎಂದು ಜರಿದರು.
ಕಾರ್ಯಕರ್ತರು ಕೈಯಲ್ಲಿ ಚೊಂಬು ಹಿಡಿದು ಕೆಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶಾಸಕ ರಾಘವೇಂದ್ರ ಹಿಟ್ನಾಳ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಾರಡ್ಡಿ ಗಲಿಬಿ, ಎಂ.ಕಾಟನ್ ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ಬಾಲಚಂದ್ರನ್, ಗಾಳೆಪ್ಪ ಪೂಜಾರ, ಜ್ಯೋತಿ ಗೊಂಡಬಾಳ, ಸವಿತಾ ಗೋರಂಟ್ಲಿ ಇತರರಿದ್ದರು.