ಜಿಲ್ಲೆ

ಸಮರ್ಥನೆ ಮಾಡಿಕೊಳ್ಳದೆ ಸಚಿವರನ್ನು ವಜಾಗೊಳಿಸಿ ; ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

Kolar

ಕೋಲಾರ: ರಾಷ್ಟ್ರಧ್ವಜಕ್ಕೆ ಅಪಮಾನವಸಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ನಗರದ ಗಾಂಧಿವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಆರ್.ಸುದರ್ಶನ್ ಮಾತನಾಡಿ, ಈಶ್ವರಪ್ಪ ರಾಷ್ಟ್ರ ದ್ವಜದ ವಿರುದ್ಧ ಹೇಳಿಕೆ ನೀಡಿರುವುದು ದೇಶ ದ್ರೋಹದ ಕೆಲಸವಾಗಿದೆ, ಇಂತಹ ವ್ಯಕ್ತಿಗಳನ್ನು ಸಚಿವ ಸಂಪುಟದಿಂದ ವಜಾಗೊಳಿಸದಿದ್ದರೆ ದೇಶದ ಸಂವಿಧಾನಕ್ಕೆ ಅಗೌರವ ಉಂಟು ಮಾಡಿದಂತಾಗುತ್ತದೆ ಎಂದರು.

ಬಿಜೆಪಿಗೆ ರಾಷ್ಟ್ರ ಧ್ವಜದ ಮೇಲೆ ಗೌರವ ಇದ್ದಿದ್ದರೆ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳುತ್ತಿತ್ತು, ಆದರೆ ಈ ಪಕ್ಷದ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಆತಂಕವನ್ನುಂಟು ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಧ್ವಜದ ಮೇಲೆ ಗೌರವ ಇರುವುದರಿಂದಲೇ ಕ್ರಮಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿದೆ, ಸರ್ಕಾರ ಈಶ್ವರಪ್ಪ ಪರ ನಿಂತಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದರು.

ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷ ಕೆ.ಜಯದೇವ್, ಕೆಪಿಸಿಸಿ ಒಬಿಸಿ ವಿಭಾಗದ ಉಪಾಧ್ಯಕ್ಷ ಎಸ್.ಮಂಜುನಾಥ್, ಮಹಿಳಾ ಘಟಕ ಅಧ್ಯಕ್ಷೆ ರತ್ಮಮ್ಮ, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಅಲ್ಪಸಂಖ್ಯಾತರ ಘಟಕದ ಪ್ಯಾರೇಜಾನ್, ಮುಖಂಡರಾದ ಅಶೋಕ್ ಕುಮಾರ್, ಜಗನ್, ಅತ್ತಾವುಲ್ಲಾ ಖಾನ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಭರತ್ ರಾಜ್ ಇತರರು ಪಾಲ್ಗೊಂಡಿದ್ದರು.