congress program at devnalli 
ಜಿಲ್ಲೆ

ಗ್ಯಾರಂಟಿ ಸಮಾವೇಶದಲ್ಲಿ ಮತಬೇಟೆ

ಶಿವರಾಜ.ಎಂ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಲೋಕಸಭಾ ಚುನಾವಣೆ ೋಷಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ತರಾತುರಿಯಲ್ಲಿ ಹೊರಟು ನಿಂತಿರುವ ಕೈ ನಾಯಕರು ಗ್ಯಾರಂಟಿ ಸಮಾವೇಶದ ವೇದಿಕೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಸರ್ಕಾರದ ಬೆನ್ನುತಟ್ಟಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರ ವಿರುದ್ಧ ಟೀಕಾಸ ಪ್ರಯೋಗಿಸುತ್ತಿದ್ದಾರೆ. ಇತ್ತೀಚಿಗೆ ನಡೆದ ನೆಲಮಂಗಲ ಸಮಾವೇಶ ಹಾಗೂ ಭಾನುವಾರ ಆಯೋಜಿಸಿದ್ದ ಹೊಸಕೋಟೆ ಸಮಾವೇಶದಂತೆ ಸೋಮವಾರ ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಅದೇ ಅಂಶಗಳನ್ನು ಪುನರಾವರ್ತನೆ ಮಾಡಿದ ಕೈ ನಾಯಕರು ಬಹಿರಂಗವಾಗಿ ಮತಬೇಟೆ ಮಾಡಿದರು.
ಮೋದಿ ಅಲೆ ಎದುರು ಕೈ ಮತಗಳು ಕೊಚ್ಚಿಹೋಗದಂತೆ ಗ್ಯಾರಂಟಿ ಅಸ ಪ್ರಯೋಗಿಸುತ್ತಿರುವ ಕಾಂಗ್ರೆಸ್ ನಾಯಕರು, ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮದುದ್ದಕ್ಕೂ ನೀವು ಗ್ಯಾರಂಟಿ ಪರವಾಗಿದ್ದೀರಾ, ನಿಮಗೆ ಉಚಿತ ಬಸ್ ಪ್ರಯಾಣ ಬೇಡವೆ?, ತಿಂಗಳಿಗೆ 2 ಸಾವಿರ ರೂ. ಬೇಡವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದುದ್ದಕ್ಕೂ ನಮ್ಮ ಕೈ ಬಿಡಬೇಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಗೋಗೆರೆದರು.
ಎಲ್ಲರೂ ಗ್ಯಾರಂಟಿ ಯೋಜನೆ ಹಕ್ಕುದಾರರು: ಎಲ್ಲ ಜಾತಿ ಹಾಗೂ ಎಲ್ಲ ಧರ್ಮದ ಬಡವರು ಮತ್ತು ಮಧ್ಯಮ ವರ್ಗದರು ಗ್ಯಾರಂಟಿ ಯೋಜನೆಗಳ ಹಕ್ಕುದಾರರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ದೇವನಹಳ್ಳಿಯ ಕುಂದಾಣದಲ್ಲಿ ಸೋಮವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಟ್ಟ ಮಾತಿನಂತೆ ನಡೆದುಕೊಂಡು ನಿಮ್ಮ ಮತಕ್ಕೆ ಗೌರವ ತಂದುಕೊಟ್ಟವರು ನಾವು. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆಯೇ?, ನಿಮ್ಮ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುತ್ತಿರುವವರು ನಾವಾ? ಬಿಜೆಪಿಯಾ? ಇದನ್ನು ನಿಮ್ಮ ಹೃದಯಕ್ಕೆ ಕೇಳಿಕೊಂಡು ತೀರ್ಮಾನಿಸಿ ಎಂದರು.
ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ ಸೇರಿ ಹತ್ತಾರು ಭಾಗ್ಯಗಳು, ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ನಾವು ಕೊಟ್ಟ ಮಾತಿನಂತೆ ಪ್ರತೀ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಸಿಎಂ ಜನಸ್ತೋಮಕ್ಕೆ ಕೈ ಮುಗಿದರು.

ಮೋದಿ ಕಪ್ಪು ಹಣ ತಂದರಾ?
ಮೋದಿ ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂ. ಹಾಕ್ತೀವಿ ಎಂದರು. ಈ ಹಣ ಹಾಕಿದ್ರಾ?, ವಿದೇಶದಿಂದ ಕಪ್ಪು ಹಣ ತಂದರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಅಚ್ಛೇದಿನ್ ಆಯೆಗಾ ಎಂದ ಪ್ರಧಾನಿ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡ, ಮಧ್ಯಮ ವರ್ಗದವರ ಬದುಕನ್ನೇ ದುಸ್ತರ ಮಾಡಿಬಿಟ್ಟರು. ಬಡವರು ಇನ್ನಷ್ಟು ಬಡವರಾಗುತ್ತಲೇ ಹೋಗಬೇಕು, ಮಧ್ಯಮ ವರ್ಗದವರು ಬಡತನಕ್ಕೆ ಜಾರಬೇಕು ಎನ್ನುವುದು ಬಿಜೆಪಿ ಅಜೆಂಡಾ. ಹೀಗಾಗಿ ಮಧ್ಯಮ ವರ್ಗದವರು, ಬಡವರಿಗೆ ಕಾಂಗ್ರೆಸ್ ಸರ್ಕಾರ ಕೊಡುವ ಎಲ್ಲ ಕಾರ್ಯಕ್ರಮಗಳನ್ನೂ ವಿರೋಧಿಸುತ್ತಾರೆ, ಫಲಾನುಭವಿಗಳನ್ನು ಅವಮಾನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಸಂವಿಧಾನದ ಆಶಯಗಳಂತೆ ಸರ್ವರ ಕಲ್ಯಾಣದ ಕಾರ್ಯಕ್ರಮ ರೂಪಿಸುತ್ತಿದೆ. ನಮ್ಮ ಸಂವಿಧಾನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವ ಸಮೂಹ ಸೇರಿ ಸರ್ವರಿಗೂ ಅವಕಾಶ ನೀಡಿದೆೆ. ಈ ಅವಕಾಶಗಳನ್ನು ನಾಶ ಮಾಡಬೇಕು ಎನ್ನುವ ಕಾರಣಕ್ಕೆ ಬಿಜೆಪಿ, ಸಂವಿಧಾನವನ್ನು ಬದಲಾಯಿಸುವ ಹಾಗೂ ಮನುಸ್ಕೃತಿ ಪರವಾಗಿ ಮಾತನಾಡುತ್ತಿದೆ ಎಂದು ದೂರಿದರು.