ಜಿಲ್ಲೆ

ಬಿಜೆಪಿ ಕಾರ್ಯಕರ್ತರನ್ನು ಸಿಲುಕಿಸಲು ಕಾಂಗ್ರೆಸ್ ಒತ್ತಡ - ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪ

ಹರೀಶ ಎಂ.

ಮಂಗಳೂರು: ಕುಡುಪು ಪ್ರಕರಣದಲ್ಲಿ ನಮಗೆ 30 ಜನರು ಆರೋಪಿಗಳನ್ನು ನೀಡಿ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಬಳಿ ಪೊಲೀಸರು ಹೇಳುತ್ತಿದ್ದಾರೆ. ಈ ಮೂಲಕ ನಮಗೆ ರಾಜಕೀಯ ಒತ್ತಡವಿದೆ ಎಂದು ಪರೋಕ್ಷವಾಗಿ ಪೊಲೀಸರು ಒಪ್ಪಿಕೊಳ್ಳುತ್ತಿದ್ದಾರೆ. ಇಂಥವರನ್ನೇ ಬಂಧಿಸಬೇಕು ಎಂಬ ಒತ್ತಡವಿದೆ ಎನ್ನುತ್ತಿದ್ದಾರೆ. ರಾಜಕೀಯ ಅನುಕೂಲಕ್ಕಾಗಿ ಅಮಾಯಕ ಬಿಜೆಪಿ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಿದರೆ ನಾವು ಅಮಾಯಕರ ಪರವಾಗಿ ನಿಲ್ಲುತ್ತೇವೆ. ಪ್ರತಿಭಟನೆ, ಠಾಣೆಗೆ ಘೆರಾವ್ ಹಾಕುತ್ತೇವೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಎಚ್ಚರಿಸಿದ್ದಾರೆ.

ಕುಡುಪುವಿನಲ್ಲಿ ನಡೆದ ಕೇರಳ ಮೂಲದ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಗುರುತಿಸುವ ಬದಲಿಗೆ ಇಂಥವರೇ ಆರೋಪಿಗಳು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಗೆ ತೀರ್ಪು ನೀಡುತ್ತಾರೆ? ಎಂದು ಪ್ರಶ್ನಿಸಿದ ಅವರು, ಪೊಲೀಸರಿಂದ ಒಟ್ಟು ಪ್ರಕರಣದ ಮಿಸ್ ಮ್ಯಾನೇಜ್‌ಮೆಂಟ್ ಆಗಿದೆ. ರಾಜಕೀಯ ಒತ್ತಡದಿಂದ ಪೊಲೀಸರ ಅಮಾನತು ಆಗಿದೆ. ಪೊಲೀಸ್ ಆಯುಕ್ತರಿಂದ ಅಮಾನತು ಬಗ್ಗೆ ಅಧಿಕೃತ ಆದೇಶ ಬರುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಅಮಾನತು ಆದೇಶ ಹರಿದಾಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತ ರವೀಂದ್ರ ನಾಯಕ್ ಅವರ ಹೆಸರನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹೇಳಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಗುತ್ತಿದೆ ಎಂದು ಹೇಳಿದರು.

ಆಕಸ್ಮಿಕ ಘಟನೆ

ಸ್ಲೀಪರ್ ಸೆಲ್‌ಗಳು ದೇಶದೊಳಗೆ ಇವೆ. ಪಾಕ್ ಪರ ಮಾತನಾಡುವವರು ಇದ್ದಾರೆ. ಇಂತಹ ವಾತಾವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯನ್ನು ಕುಡುಪುವಿನಲ್ಲಿ ಥಳಿಸಲಾಗಿದೆ. ಪರಿಸ್ಥಿತಿ ಕೈತಪ್ಪಿ ಹೋಗಿದೆ. ಈ ಪ್ರಕರಣವನ್ನು ಅಪರಾಧವಾಗಿಯೇ ಪರಿಗಣಿಸಬೇಕು. ರಾಜಕೀಯ ಬೆರೆಸುವುದನ್ನು ಸಹಿಸುವುದಿಲ್ಲ ಎಂದು ಡಾ.ಭರತ್ ಶೆಟ್ಟಿ ಹೇಳಿದರು.

ಕೊಲೆಯಾದ ವ್ಯಕ್ತಿಯ ಹಿನ್ನೆಲೆ ಏನು, ಆತ ಏಕೆ ಮಂಗಳೂರಿಗೆ ಆಗಮಿಸಿದ ಎಂಬ ಬಗ್ಗೆಯೂ ತನಿಖೆಯಾಗಬೇಕು. ಬೆಂಗಳೂರಿನಲ್ಲಿ ದನದ ಕೆಚ್ಚಲು ಕೊಯ್ದ ವ್ಯಕ್ತಿ ಮಾನಸಿಕ ಅಸ್ವಸ್ಥ ಎನ್ನಲಾಯಿತು. ಪಾಕ್ ಪರ ಘೋಷಣೆ ಕೂಗಿದವನನ್ನೂ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಇಂತಹ ಮಾನಸಿಕ ಅಸ್ವಸ್ಥರೇ ತುಂಬಿ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಉಪಾಧ್ಯಕ್ಷ ಲೋಹಿತ್ ಅಮೀನ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆಶಿತ್ ನೋಂಡಾ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಮನೋಹರ ಶೆಟ್ಟಿ, ರಣದೀಪ್ ಕಾಂಚನ್ ಉಪಸ್ಥಿತರಿದ್ದರು.