ಕಾರ್ಕಳ: ಬೈಲೂರಿನ ಉಮಿಕ್ಕಲ ಬೆಟ್ಟದ ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವುದು ಖುಷಿ ತಂದಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಕಾಂಗ್ರೆಸ್ ಪ್ರತಿಭಟನೆಯನ್ನು ಲೇವಡಿ ಮಾಡಿದ್ದಾರೆ.
ಥೀಂ ಪಾರ್ಕ್ ಅಭಿವೃದ್ಧಿಗೆ ತಡೆಯೊಡ್ಡಿ, ಸರಿಯಾದ ತನಿಖೆ ನಡೆಸದ, ಬಾಕಿ ಕಾಮಗಾರಿ ಮುಂದುವರೆಸಲು ಹಣ ನೀಡದ ಕಾಂಗ್ರೆಸ್ ಸರ್ಕಾರ ವಿರುದ್ಧ ಕಾಂಗ್ರೆಸ್ ನಡೆಸುವ ಈ ಪ್ರತಿಭಟನೆಯಿಂದ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯರವರ ಮೇಲೆ ಒತ್ತಡ ಬಂದು, ಬಾಕಿ ಹಣ ಶೀಘ್ರ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ನಮ್ಮದು ಎಂದರು.
ಥೀಂ ಪಾರ್ಕ್ ಕುರಿತು ಆರೋಪ ಮಾಡುವ ಕಾಂಗ್ರೆಸ್ಸಿಗರಿಗೆ ತಮ್ಮದೆ ಸರ್ಕಾರ ಇದ್ದರೂ ಕಳೆದ ಒಂದುವರೆ ವರ್ಷದಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಲು ಸಾಧ್ಯವಾಗಿಲ್ಲ. ಕಾಮಗಾರಿಯಲ್ಲಿ ಲೋಪವಾದಲ್ಲಿ ತಮ್ಮದೆ ಸರ್ಕಾರ ಅಧಿಕಾರದಲ್ಲಿರುವಾಗ ಯಾವುದೇ ತನಿಖೆ ಮೂಲಕವಾದರೂ ಬಹಿರಂಗ ಪಡಿಸಬೇಕಿತ್ತು. ಬಾಕಿ ಹಣ ಬಿಡುಗಡೆಗೊಳಿಸಿ ಉಳಿದ ಕೆಲಸ ಪೂರ್ಣಗೊಳಿಸುತಿಲ್ಲ. ನಿಮ್ಮ ಪ್ರತಿಭಟನೆ ಯಾರ ವಿರುದ್ಧ ಎನ್ನುವುದೇ ನಮಗೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.