ಮದ್ದೂರು: ಜಿಲ್ಲಾ ಹಾಲು ಒಕ್ಕೂಟದಲ್ಲಿ 2021ರಲ್ಲಿ ನಡೆದಿದ್ದ ಹಾಲಿಗೆ ನೀರು ಬರೆಸುವ ಹಗರಣದ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್ ಮೇಲೆ 50 ಲಕ್ಷ ರೂ.ಮಾನನಷ್ಟ ಮೊಕದ್ದಮೆ ಹಾಕಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಆರೋಪಿಸಿದರು.
2021ರ ವೇಳೆಯಲ್ಲಿ ನಡೆದಿದ್ದ ಮನ್‌ಮುಲ್‌ಗೆ ಸೇರಿದ ಕೆಲವು ಹಾಲಿನ ಟ್ಯಾಂಕರ್‌ಗಳಲ್ಲಿ ನೀರು ಬೆರೆಸುವ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಸಹಾಯಕ ರಘು ಅವರ ಪಾತ್ರವಿದೆ ಎಂದು ಆರೋಪಿಸಿ ಸೂಕ್ತ ತನಿಖೆಯನ್ನು ನಡೆಸಿ ಹಾಲು ಉತ್ಪಾದಕರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದೆವು. ಅದಕ್ಕೆ ಈ ರೀತಿ ಮಾನನಷ್ಟ ಕೇಸ್ ಅನ್ನು ರಘು ಎಂಬುವರು ಹಾಕಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯದಲ್ಲಿ ಜಾಮೀನು ತೆಗೆದುಕೊಂಡಿದ್ದೇವೆ. ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಗರಣ ನಡೆದ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿತರ ನೇತೃತ್ವದ ಆಡಳಿತ ಮಂಡಳಿಯಿತ್ತು. ಜೆಡಿಎಸ್ ಅವರಿಗೆ ನಿಜವಾಗಿಯೂ ಹಾಲು ಒಕ್ಕೂಟದ ಮೇಲೆ ಹಾಗೂ ಹಾಲು ಉತ್ಪಾದಕರ ಮೇಲೆ ಕಾಳಜಿ ಇದ್ದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದನ್ನು ಬಿಟ್ಟು ನಮ್ಮ ಮೇಲೆ ಮೊಕದ್ದಮೆ ಹೂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಕರಣದ ಸತ್ಯವನ್ನು ಯಾರೂ ಮುಚ್ಚಿ ಹಾಕಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಖಂಡಿತವಾಗಿ ಶಿಕ್ಷೆ ಕೊಡಿಸಲಾಗುವುದು ಎಂದರು.
ಮುಂದೆ ಬರುವ ತಾ.ಪಂ ಹಾಗೂ ಜಿ.ಪಂ ಸೇರಿದಂತೆ ಹಲವು ಚುನಾವಣೆಗಳಲ್ಲಿ ಜೆಡಿಎಸ್‌ನವರು ನಮ್ಮ ಮೇಲೆ ದುರುದ್ದೇಶದಿಂದ ಹಾಕಿರುವ ಮಾನನಷ್ಟ ಮೊಕದ್ದಮೆಯನ್ನು ಜನರಿಗೆ ತಿಳಿಸಿ, ಚುನಾವಣೆಯಲ್ಲಿ ಅವರಿಗೆ ಮತದಾರರು ತಕ್ಕಪಾಠ ಕಲಿಸುವಂತೆ ಮಾಡುತ್ತೇವೆ. ಈಗಾಗಲೇ ಮನ್‌ಮುಲ್ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಸೋತು ತೀವ್ರ ಮುಖಭಂಗ ಅನುಭವಿಸಿದೆ. ಅದೇ ರೀತಿ ತಾಪಂ ಹಾಗೂ ಜಿಪಂ ಚುನಾವಣೆಯಲ್ಲೂ ಜೆಡಿಎಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.
ಜಿಲ್ಲಾ ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಶಂಕರೇಗೌಡ ಇದ್ದರು.