ಪುತ್ತೂರು: ಶಾಸಕರ ಕಚೇರಿ ನಗರಸಭೆಯ ಕಟ್ಟಡವಾಗಿದ್ದು, ಅದನ್ನು ದುರಸ್ಥಿ ಪಡಿಸಲು ನಗರಸಭೆಯ ಅನುದಾನವನ್ನು ಬಳಸಬೇಕಷ್ಟೆ. ಶಾಸಕರ ಕಚೇರಿ ಹೊರತು ಅಶೋಕ್ ಕುಮಾರ್ ರೈ ಅವರ ವೈಯುಕ್ತಿಕ ಕಚೇರಿಯಲ್ಲ. ಮುಂದಿನ ದಿನ ಯಾರೆ ಶಾಸಕರಾಗಲಿ ಅವರಿಗೆ ಈ ಕಚೇರಿ ಉಪಯೋಗಕ್ಕೆ ಬರುತ್ತದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಹೇಳಿದರು.
ಅಶೋಕ್ ಕುಮಾರ್ ರೈ ಅವರು ಶಾಸಕರಾಗಿ ಮೂರೇ ತಿಂಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಹಾಕಿಕೊಂಡು ಜನಪ್ರಿಯರಾಗುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ಮಾಜಿ ಶಾಸಕ ಸಂಜೀವ ಮಠಂದೂರು ಶಾಸಕರ ನೂತನ ಕಚೇರಿ ಕುರಿತು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಅವರ ಐಷಾರಮಿ ಕಚೇರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ತೆರಿಗೆಯ ದುರುಪಯೋಗವಲ್ಲವೇ ಎಂದು ಪ್ರತಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ಕೊಡಲಿಲ್ಲ ಮತ್ತು ಇವತ್ತು ಮಾಜಿ ಶಾಸಕರಿಗೆ ಕೆಲಸವಿಲ್ಲ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ವಿಚಾರ ತೆಗೆದು ಕೊಂಡು ಮಾಧ್ಯಮದ ಮುಂದೆ ಬರುತ್ತಿದ್ದಾರೆ. ಅಶೋಕ್ ಕುಮಾರ್ ರೈ ಅವರು ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಹಾಗು ವಿವಿಧ ಇಲಾಖೆಯ ಅಧಿಕಾರಿಗಳಲ್ಲಿ ಸಭೆ ನಡೆಸಲು ಅನುಕೂಲವಾಗುವ ವ್ಯವಸ್ಥಿತವಾದ ಕಚೇರಿ ಇರಬೇಕೆಂಬ ಸುದುದ್ದೇಶದಿಂದ ಸುಸಜ್ಜಿತ ಕಚೇರಿ ನಿರ್ಮಿಸುವಂತೆ ಜಿಲ್ಲಾಡಳಿತದಲ್ಲಿ ಕೇಳಿಕೊಂಡಂತೆ ಹಿಂದಿನ ಪುರಸಭಾ ಕಟ್ಟಡದಲ್ಲಿ ನೂತನ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ ಈ ವಿಷಯವನ್ನು ತೆಗೆದು ಕೊಂಡು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ಶಾಸಕ ಸಂಜೀವ ಮಠಂದೂರು ಅವರ ಮಿನಿ ವಿಧಾನ ಸೌಧದಲ್ಲಿರುವ ಕಚೇರಿ ಗೂಡಂಗಡಿಯಂತೆ ಇತ್ತು. ಈ ಕಚೇರಿಯಲ್ಲಿ ಸಾರ್ವಜನಿಕರಿಗೆ ಬಂದು ಭೇಟಿಯಾಗಿ ಮಾತನಾಡಲು ಸರಿಯಾದ ಸ್ಥಳಾವಕಾಶವಿರಲಿಲ್ಲ. ಅವರಿಗೆ ಸಾರ್ವಜನಿಕರಿಗೆ ತನ್ನ ಕಚೇರಿಯಿಂದ ಅನಾನುಕೂಲ ಆಗುತ್ತದೆ ಎಂಬ ಕಾಳಜಿಯೂ ಇರಲಿಲ್ಲ. ಆದರ ಈಗಿನ ಶಾಸಕರು ಸಾರ್ವಜನಿಕರಿಗಾಗಿ ವಿಶಾಲವಾದ ಕಚೇರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅದ್ಯಕ್ಷೆ ಜಯಂತಿ ಬಲ್ನಾಡು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಪಾಯಸ್, ಉಪಾಧ್ಯಕ್ಷ ಮಂಜುನಾಥ್ ಕೆಮ್ಮಾಯಿ ಉಪಸ್ಥಿತರಿದ್ದರು.