ಸಾಲಿಗ್ರಾಮ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರ ನಿಖಿಲ್ ಅವರನ್ನು 5 ಸಾವಿರ ರೂ. ಗಿಫ್ಟ್‌ಕಾರ್ಡ್ ಹಂಚಿ ಸೋಲಿಸಿದಂತೆ ನನ್ನನ್ನು ಸೋಲಿಸಲು ಈ ಬಾರಿ 10 ಸಾವಿರ ರೂ.ನ ಗಿಫ್ಟ್‌ಕಾರ್ಡ್ ಹಂಚಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.
ಕಾಂಗೆಸ್ ನನ್ನ ಸೋಲಿಸಲು ಇಲ್ಲದ ಷಡ್ಯಂತ್ರ ಮಾಡುತ್ತಿದ್ದು, ಮತದಾರರು ಆಮಿಷಗಳಿಗೆ ಬಲಿಯಾಗಬಾರದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉತ್ತಮ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಜತೆ ಕೈ ಜೊಡಿಸಿದ್ದು, ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ನರೇದ್ರ ಮೋದಿ ಪ್ರಧಾನಿ ಆಗಲು ಅವಕಾಶ ಮಾಡಿಕೊಡಿ ಎಂದರು.
ಗ್ಯಾರಂಟಿ ಭಾಗ್ಯ ಕೊಡುವ ಸಲುವಾಗಿ ರಾಜ್ಯ ಸರ್ಕಾರ ಪ್ರತಿಯೊಬ್ಬರ ಮೇಲೂ ಲಕ್ಷಾಂತರ ರೂ. ಸಾಲವನ್ನು ಹೇರಿ ಅಭಿವೃದ್ಧಿ ಕೆಲಸ ಮಾಡದೇ ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದು ಇಂತಹ ಸರ್ಕಾರವನ್ನು ಕಿತ್ತು ಒಗೆಯಲು ತಮಗೆ ಮತ ನೀಡಿ ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದರು. ಸಾರಾಯಿ, ಲಾಟರಿ ನಿಷೇಧ ಮಾಡಿದರು. ಆದರೆ ಈಗಿನ ಕಾಂಗ್ರೆಸ್ ಛಾಪಕಾಗದ ದರ ಹೆಚ್ಚಿಸಿದೆ. ರೈತರಿಗೆ ಸಕಾಲದಲ್ಲಿ ಸಾಲ, ಹೈನುಗಾರಿಕೆ ಪ್ರೋತ್ಸಾಹಧನ ನೀಡದೇ ಶೋಷಣೆ ಮಾಡುತ್ತಿದೆ. ಜನರ ಮೇಲೆ ಸಾಲದ ಹೊರೆಸಿ ಅಭಿವೃದ್ಧಿ ಕಡೆಗಣಿಸಿರುವ ರಾಜ್ಯ ಸರ್ಕರಕ್ಕೆ ತಕ್ಕ ಪಾಠ ಕಲಿಸ ಬೇಕಾದರೇ ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ನಾಡಗೌಡ ಮಾತನಾಡಿದರು. ಇದಕ್ಕೂ ಮೊದಲು ಹೊಸೂರಿಗೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ನೂರಾರು ಮಹಿಳೆಯರ ಪೂರ್ಣಕುಂಬದೊಂದಿಗೆ ಮೇರೆವಣಿಗೆ ನಡೆಸಿ ಸ್ವಾಗತಿಸಿದರು. ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಕಿತ್ತಳೆ-ಮೊಸಂಬಿ ಹಾರ ಹಾಕಿ ಅಭಿನಂದಿಸಿದರು.
ಮಾಜಿ ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಹುಣಸೂರು ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಓಡೆಯರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ, ವಸ್ತು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ಬಿಜೆಪಿ ಮುಖಂಡ ಹೊಸಳ್ಳಿ ವೆಂಕಟೇಶ್, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ.ಕೀರ್ತಿ, ತಾಲೂಕು ಜೆಡಿಎಸ್ ಯುತ ಅಧ್ಯಕ್ಷ ಕಾರ್ತಿಕ್ ಮಧು, ಮಹೇಶ್, ದಿನೇಶ್ ಜೆಡಿಎಸ್ ಬಂಡಹಳ್ಳಿ ಕುಚೇಲ್, ರಾಜೇಶ್, ಬಿ.ರಮೇಶ್, ಎಚ್.ಕೆ.ಕೀರ್ತಿ, ಎಚ್.ವಿ.ಅನಿಲ್ ಕುಮಾರ್ ಇದ್ದರು.