ಮಂಡ್ಯ: ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಗಿಮಿಕ್ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಜ.27ರಂದು ಆಯೋಜಿಸಿರುವ ಪ್ರಜಾಧ್ವನಿ ಸಮಾವೇಶದ ಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 7 ಕೆ.ಜಿ ಅಕ್ಕಿ ನೀಡುತ್ತಿದ್ದೆವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದನ್ನು 5 ಕೆ.ಜಿಗೆ ಇಳಿಕೆ ಮಾಡಿತ್ತು. ನಾವು ಈಗ 10 ಕೆ.ಜಿ ಅಕ್ಕಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದ್ದಂತೆ ಎಚ್ಚೆತ್ತ ಬಿಜೆಪಿ 12 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಕೇವಲ ಗಿಮಿಕ್ ರಾಜಕಾರಣ ಅಷ್ಟೆ. ಕಳೆದ ಮೂರೂವರೆ ವರ್ಷಗಳಿಂದ ಕೊಡದ ಬಿಜೆಪಿ ಸರ್ಕಾರ ಈಗ ನೀಡಲು ಮುಂದಾಗಿದೆ ಎಂದರು.
ಕಾಂಗ್ರೆಸ್ ಘೋಷಿಸಿರುವ ಪ್ರಣಾಳಿಕೆಯಿಂದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಬ್ಬಿಬ್ಬಾಗಿವೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್ ವಿದ್ಯುತ್ ನೀಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯಡಿ ಪ್ರತೀ ಕುಟುಂಬದ ಮಹಿಳೆಗೆ 2 ಸಾವಿರ ರೂ ನೀಡುವ ಘೋಷಣೆ ಮಾಡಿರುವುದನ್ನು ಅವರು ಸಹಿಸಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್‌ನವರಿಗೆ ಯಾವ ರೀತಿ ಆಡಳಿತ ನೀಡಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.
ತಾಲೂಕಿನ ಹುಲಿವಾನ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಮಾವೇಶಕ್ಕೆ ಭಾಗವಹಿಸಬೇಕಿತ್ತು. ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬರಲಾಗಲಿಲ್ಲ. ಸಂಘಟನೆಯಲ್ಲಿ ಶೇ.100ರಷ್ಟು ಒಗ್ಗಟ್ಟು ಇದೆ. ಮಂಡ್ಯ ಕ್ಷೇತ್ರದಲ್ಲಿ 16 ಜನ ಆಕಾಂಕ್ಷಿತರಿದ್ದಾರೆ. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ಇನ್ನು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರೊಂದಿಗೆ ಮೊಬೈಲ್‌ನಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದೇವೆಯೇ ಹೊರತು ಅದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಬೇರೆ ಮುಖಂಡರ ಜತೆಗೆ ಮಾತನಾಡಬಾರದೆಂದಿದೆಯಾ?. ನಾಗಮಂಗಲದ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಮಂಡ್ಯ ಕ್ಷೇತ್ರದ ಜನತ ಪ್ರೀತಿಯಿಂದ ಕರೆಯುತ್ತಿದ್ದಾರೆ. ಆದರೆ ಇಲ್ಲಿಗೆ ಬರುವುದಿಲ್ಲ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಯುವ ಘಟಕದ ಮಾಜಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಕಾರ್ಮಿಕ ವಿಭಾಗದ ಅಧ್ಯಕ್ಷ ಬಿ.ಟಿ.ಗುರುರಾಜ್, ಯುವ ಘಟಕದ ಅಧ್ಯಕ್ಷ ವಿಜಯ್‌ಕಮಾರ್ ಇತರರಿದ್ದರು.