ಜಿಲ್ಲೆ

ರಾಜ್ಯಾದ್ಯಂತ ಗಾಂಧಿ ಭಾರತ ಕಾರ್ಯಕ್ರಮ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸೊರಕೆ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಮಹಾತ್ಮ ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ಈಗಾಗಲೇ ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಯಶಸ್ವಿಯಾಗಿ ನಡೆಸಲಾಗಿದೆ. ಇದೀಗ ಪಕ್ಷದ ವತಿಯಿಂದ ಗಾಂಧಿ ಭಾರತ್ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ವರ್ಷವಿಡಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ, ಬ್ಲಾಕ್ ಪ್ರಚಾರ ಸಮಿತಿ ಹಾಗೂ ಪಂಚಾಯಿತಿ ಮಟ್ಟ ಹೀಗೆ ತಲಾ 23 ಸದಸ್ಯರನ್ನೊಳಗೊಂಡ ಸಮಿತಿಗಳನ್ನು ರಚಿಸಲಾಗುವುದು. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸಂಘಟನೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಪ್ರಚಾರ ಸಮಿತಿಯು ಕೇವಲ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡದೇ ರಾಜ್ಯದಲ್ಲಿ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಸೇರಿದಂತೆ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಈ ಕಾರ್ಯವನ್ನು ನಿರಂತರವಾಗಿ ಮಾಡುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ ಎಂದರು.

ಚುನಾವಣೆ ಆಯೋಗ ಬಿಜೆಪಿಯ ಕೈಗೊಂಬೆಯಾಗಿದೆ. ಮತಗಳವು ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ತಂಡದ ಮೂಲಕ ಸಮೀಕ್ಷೆ ನಡೆಸಿ, ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ. ಚುನಾವಣೆ ಆಯೋಗ ದುರ್ಬಳಕೆ ವಿರುದ್ಧ ಕೈಗೊಳ್ಳಲಿರುವ ಹೋರಾಟದ ರೂಪುರೇಷೆಗಳ ಕುರಿತು ಶೀಘ್ರ ಚರ್ಚಿಸಲಾಗುತ್ತದೆ ಎಂದರು.

ಮಹಾನಗರ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪ್ರಚಾರ ಸಮಿತಿ ಉಪಾಧ್ಯಕ್ಷ ಜೆ.ಡಿ. ನಾಯಕ, ಮುಖಂಡರಾದ ಚಂದ್ರಶೇಖರ ಜುಟ್ಟಲ, ಮೋಹನ ಹಿರೇಮನಿ, ಸದಾನಂದ ಡಂಗನವರ, ಶರಣಪ್ಪ ಕೊಟಗಿ, ವಸಂತ ಲದವಾ, ಜ್ಯೋತಿ ಪಾಟೀಲ, ಇತರರು ಇದ್ದರು.

ಸಂಘ ಪರಿವಾರ ದ್ವಂದ್ವ:
ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದವರು ದ್ವಂದ್ವ ನಿಲುವು ಪ್ರಕಟಿಸುತ್ತಿದ್ದಾರೆ. ಮಹೇಶ ಶೆಟ್ಟಿ ತಿಮರೋಡಿ ಯಾವ ಮೂಲದವರು? ಅವರಿಗೆ ಪ್ರಚೋದನೆ ನೀಡುತ್ತಿರುವವರು ಯಾರು? ಒಂದು ಕಡೆ ಮಗು ಚಿವುಟಿ, ಇನ್ನೊಂದು ಕಡೆ ತೊಟ್ಟಿಲು ತೂಗುವ ಕೆಲಸವನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಡುತ್ತಿದ್ದಾರೆ ಎಂದು ಸೊರಕೆ ಆರೋಪಿಸಿದರು.

ಬಿಜೆಪಿ ಶಾಸಕರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಬಂದಾಗ ಅದರಲ್ಲಿ ಪ್ರಭಾಕರ ಭಟ್ ಅವರು ಏಕೆ ಇರಲಿಲ್ಲ? ಎಂದು ಪ್ರಶ್ನಿಸಿದ ಅವರು, ಧರ್ಮಸ್ಥಳ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ಸಿಗೆ ಯಾವುದೇ ಹಿತಾಸಕ್ತಿ ಇಲ್ಲ. ಕೋರ್ಟ್ ಆದೇಶದ ಮೇರೆಗೆ ಎಸ್ಐಟಿ ರಚನೆಯಾಗಿದೆ. ವೀರೇಂದ್ರ ಹೆಗ್ಗಡೆ ಅವರೂ ಎಸ್ಐಟಿ ರಚನೆ ಸ್ವಾಗತಿಸಿದ್ದಾರೆ. ತನಿಖೆ ನಂತರ ಶೀಘ್ರ ವಾಸ್ತವಾಂಶ ಹೊರಬರಲಿದೆ. ಅಲ್ಲಿಯವರೆಗೂ ಕಾಯೋಣ ಎಂದರು.

ಬಿಜೆಪಿ ನಡೆಸಲಿರುವ ಧರ್ಮಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕೂಡ ಹಿಂದುಗಳೇ, ಬಿಜೆಪಿಯವರು ಜನರ ಭಾವನೆಗಳನ್ನು ಕದಡಿ ವೋಟ್ ಕೇಳಿದರೆ, ನಾವು ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದರು.