ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಅತೃಪ್ತಿಯು ಸಧ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಬಿ ಫಾರಂ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿತರ ನಡುವೆ ಶೀತಲ ಸಮರ ನಡೆಯುತ್ತಿದೆ. ಮಾತ್ರವಲ್ಲದೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆಚ್ಚಿನ ಆಕಾಂಕ್ಷಿತರು ಅಂದರೆ ಬರೋಬರಿ 16 ಜನರು ಅರ್ಜಿ ಸಲ್ಲಿಸಿರುವುದು ಹಳೆಯ ವಿಚಾರ. ಈ ಪೈಕಿ ಕೆಲವರು ಮುಂಚೂಣಿಯಲ್ಲಿದ್ದರೆ, ಹಲವರು ಪೈಪೋಟಿಗಿಳಿಯದೇ ಸುಮ್ಮನಾಗಿದ್ದಾರೆ. ಈ ನಡುವೆ ಹೊರೆ ಇಳಿಸಿ ಇತ್ತೀಚೆಗೆ ‘ಕೈ ಹಿಡಿದ’ ಕೆ.ಕೆ.ರಾಧಾಕೃಷ್ಣ ಕೀಲಾರ ಅವರ ಸ್ಪರ್ಧೆ ವಿಚಾರದಲ್ಲಿ ಉಳಿದ ಆಕಾಂಕ್ಷಿತರು ಅತೃಪ್ತಿಯ ಮಾತನ್ನು ಹೊರಹಾಕುತ್ತಿದ್ದಾರೆ. ಕೆಲ ದಿನದ ಹಿಂದಷ್ಟೇ ತಾಲೂಕಿನ ಹಲ್ಲೆಗೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಟಿಕೆಟ್ ಆಕಾಂಕ್ಷಿತರಾಗಿರುವ ರವಿಕುಮಾರ ಗಣಿಗ ಹಾಗೂ ಸಿದ್ಧಾರೂಢ ಸತೀಶ್‌ಗೌಡ ಅವರ ಅತೃಪ್ತಿಯ ಮಾತು ಸ್ಫೋಟಗೊಂಡಿತ್ತು.
ರಾಧಾಕೃಷ್ಣ ಅವರು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ವಲಸಿಗರೆನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಆದರೆ ಇದಕ್ಕೆ ಠಕ್ಕರ್ ಕೊಟ್ಟಿದ್ದ ಕೆಕೆಆರ್, ತಮ್ಮ ಕುಟುಂಬ ಕಾಂಗ್ರೆಸ್‌ಗಾಗಿ ದುಡಿದಿದೆ. ರಾಜಕೀಯ ಬೆಳವಣಿಗೆ ನಡುವೆ ಜೆಡಿಎಸ್ ಸೇರಬೇಕಿತ್ತು ಎನ್ನುವ ತಿರುಗುಬಾಣ ಬಿಟ್ಟಿದ್ದರು. ಇದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಪಕ್ಷ ಸೋಲು ಕಂಡಿತ್ತು. ಅಂದಿನಿಂದ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸುವುದು ಸರಿಯಲ್ಲ. ಕೆಕೆಆರ್ ಒಂದಷ್ಟು ಸಮಯ ಪಕ್ಷಕ್ಕಾಗಿ ಸೇವೆ ಮಾಡಲಿ. ವಿಧಾನಸಭೆ ಬಿಟ್ಟು ಬೇರೆ ಚುನಾವಣೆಗೆ ಅವಕಾಶ ನೀಡಬಹುದೆನ್ನುವ ದಾಳವನ್ನು ಸ್ಪರ್ಧಾಕಾಂಕ್ಷಿಗಳು ಉರುಳಿಸುತ್ತಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಪ್ರಜಾಧ್ವನಿ ಸಮಾವೇಶ ಆಯೋಜನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಯಕರು ಯಾವುದೇ ಗೊಂದಲವಾಗಬಾರದೆಂದು ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದು, ಯಾರಿಗೂ ಟಿಕೆಟ್ ಭರವಸೆ ನೀಡದೆ ಸುಮ್ಮನಿದ್ದಾರೆ.
ಡಾ.ಕೃಷ್ಣಗೆ ಅಧ್ಯಕ್ಷ ಪಟ್ಟ: ಮಂಡ್ಯ ಕ್ಷೇತ್ರದಿಂದ ಬಿ ಫಾರಂ ಆಕಾಂಕ್ಷಿಯಾಗಿದ್ದ ಡಾ.ಕೃಷ್ಣ ಕೂಡ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆ ಆಯೋಜಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಕೃಷ್ಣ ಅವರಿಗೆ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ. ಇದರೊಂದಿಗೆ ಟಿಕೆಟ್ ವಿಚಾರದಲ್ಲಿ ಮುಂದಿನ ದಿನದಲ್ಲಿ ಎದುರಾಗಬಹುದಾದ ಅಸಮಾಧಾನವನ್ನು ಬಗೆಹರಿಸಲು ನಾಯಕರು ತಂತ್ರಗಾರಿಕೆ ನಡೆ ಅನುಸರಿಸುತ್ತಿದ್ದಾರೆ. ಅಂತೆಯೇ ಅಧ್ಯಕ್ಷ ಪಟ್ಟ ಕಟ್ಟುವ ಮೂಲಕ ಪರೋಕ್ಷವಾಗಿ ಸ್ಪರ್ಧೆಯಿಂದ ದೂರ ಉಳಿಸುವ ಸೂಚನೆ ಇದಾಗಿರಬಹುದೆನ್ನುವ ಮಾತು ಪಕ್ಷದ ಅಂಗಳದಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಕೃಷ್ಣ, ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಈ ಹುದ್ದೆ ಕೊಟ್ಟ ಮಾತ್ರಕ್ಕೆ ನಾನೇನೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ನಾನು ಈಗಲೂ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಪಕ್ಷ ಯಾರಿಗೆ ಅವಕಾಶ ನೀಡಿದರೂ ಅವರ ಪರವಾಗಿ ದುಡಿಯುವುದಾಗಿ ತಿಳಿಸಿದ್ದಾರೆ.