ಜಿಲ್ಲೆ

ಜಿಲ್ಲಾ ಕಾಂಗ್ರೆಸ್ ಭಿನ್ನಮತ ಶಮನಕ್ಕೆ ಹೈಕಮಾಂಡ್ ಸೂತ್ರ

Kolar

ಎನ್.ಮುನಿವೆಂಕಟೇಗೌಡ ಕೋಲಾರ
ಜಿಲ್ಲಾ ಕಾಂಗ್ರೆಸ್‌ನಲ್ಲಿನ ಎರಡು ಬಣಗಳ ನಡುವಿನ ಭಿನ್ನಮತ ಶಮನಗೊಳಿಸುವ ಯತ್ನಕ್ಕೆ ಪಕ್ಷದ ಹೈಕಮಾಂಡ್ ಮುಂದಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಕಣಕ್ಕಿಳಿಸುವ ಸೂತ್ರದೊಂದಿಗೆ ಅವರ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಕೆ.ಎಚ್.ಮುನಿಯಪ್ಪ ಬಣಗಳ ನಡುವಿನ ವಿರಸ ತಾರಕಕ್ಕೇರಿದ್ದು, ರಾಜಕೀಯವಾಗಿ ಒಬ್ಬರನ್ನೊಬ್ಬರು ಮುಗಿಸುವ ಮಾತುಗಳನ್ನು ಬಹಿರಂಗವಾಗಿಯೇ ಹೇಳಿದ್ದನ್ನು ಗಮನಿಸಬಹುದಾಗಿದೆ. ಇದರಿಂದ ಪಕ್ಷಕ್ಕೆ ಆಗುವ ಹಾನಿಯ ಕುರಿತು ನಿಷ್ಠಾವಂತರ ಮತ್ತೊಂದು ಗುಂಪು ಇದನ್ನೆಲ್ಲ ಹೈಕಮಾಂಡ್ ಗಮನಕ್ಕೆ ತಂದಿದೆ ಎನ್ನಲಾಗಿದೆ.
ಈ ನಡುವೆ ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಸ್ವತಃ ಕೆ.ಎಚ್.ಮುನಿಯಪ್ಪ ಅವರೇ, ನಾನೊಬ್ಬ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಎಂದು ಸ್ವಷ್ಟನೆ ನೀಡಿದ್ದರೂ, ಪಕ್ಷಕ್ಕೆ ಆಗಬಹುದಾದ ಹಾನಿ ಸರಿಪಡಿಸಲು ಕೆಪಿಸಿಸಿ ಹಾಗೂ ಎಐಸಿಸಿ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರ ಆಪ್ತರು ವಿಜಯವಾಣಿಗೆ ತಿಳಿಸಿದ್ದಾರೆ.


ಪಾದಯಾತ್ರೆಯಲ್ಲಿ ಚಿಗುರಿದ ದೋಸ್ತಿ

ಜಿಲ್ಲೆಯಲ್ಲಿ ಪಕ್ಷದ ಬಣ ರಾಜಕಾರಣ ಶಮನಗೊಳಿಸಲು ನಾನಾ ಪ್ರಯತ್ನಗಳನ್ನು ಮಾಡಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಹೈಕಮಾಂಡ್ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್‌ಕುಮಾರ್ ಇಬ್ಬರನ್ನು ಒಂದು ಮಾಡುವ ವಿಫಲ ಯತ್ನವನ್ನೂ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಸೋಮವಾರ ಹಿರಿಯೂರಿನಲ್ಲಿ ನಡೆದ ಪಾದಯಾತ್ರೆಯಲ್ಲಿ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ನಡೆಸುವ ಪ್ರಹಸನವೂ ನಡೆದು ರಾಹುಲ್ ಗಾಂಧಿಯವರ ಜತೆಯಲ್ಲಿ ಹೆಜ್ಜೆಹಾಕುವ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಸುರ್ಜೇವಾಲ ಒತ್ತಾಯದ ಮೇರೆಗೆ ರಮೇಶ್ ಕುಮಾರ್ ಮತ್ತು ಕೆ.ಎಚ್.ಮುನಿಯಪ್ಪ ಒಬ್ಬರ ಹೆಗಲ ಮೇಲೆ ಒಬ್ಬರ ಕೈ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಒಕ್ಕಲಿಗರ ಆರಾಧ್ಯ ದೇವರಾದ ಸೀತಿಯ ಸೀತಿ ಬೈರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ದಿವಂಗತ ಸಿ.ಬೈರೇಗೌಡರ ಸಮಾಧಿಗೆ ಮಾಲಾರ್ಪಣೆ ಮಾಡಿ ನಂತರ ನಗರದಲ್ಲಿ ಪ್ರಮುಖ ಮುಖಂಡರನ್ನು ಭೇಟಿ ಮಾಡಿಸುವ ಕಾರ್ಯಕ್ರಮ ಹಮ್ಮಿ
ಕೊಳ್ಳುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ. ಕೋಲಾರಕ್ಕೆ ಸಿದ್ದರಾಮಯ್ಯ ಬರುತ್ತಾರೆಂದು ಒಂದು ಗುಂಪು, ಬರುವುದಿಲ್ಲ ಎಂದು ಮತ್ತೊಂದು ಗುಂಪು ಹೀಗೆ ಕಾಂಗ್ರೆಸ್‌ನಲ್ಲಿ ಪರ ಹಾಗೂ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಮುನಿಯಪ್ಪಗೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಬಿಟ್ಟುಕೊಟ್ಟು ಕಾಂಗ್ರೆಸ್‌ನಲ್ಲಿರುವ ಭಿನ್ನಮತ ಶಮನ ಗೊಳಿಸಬೇಕೆಂದು ಕೆ.ಎಚ್.ಮುನಿಯಪ್ಪನವರ ಗುಂಪು ಹೈ ಕಮಾಂಡ್‌ಗೆ ಒತ್ತಡ ಹೇರುವ ಬೆನ್ನ ಹಿಂದೆಯೇ ರಮೇಶ್ ಕುಮಾರ್ ಅವರ ಘಟ್‌ಬಂಧನ್ ಗುಂಪು ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರಲು ಒಂದು ಹಂತದಲ್ಲಿ ಯಶಸ್ವಿಗೊಂಡು ದಿನಾಂಕ ನಿಗದಿಗೊಳಿಸಲು ಪೂರ್ವಭಾವಿ ಸಭೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೈ ಬೆಳವಣಿಗೆ ಯಾವ ಹಂತಕ್ಕೆ ಹೋಗುತ್ತದೆ ಎಂದು ಕಾದು ನೋಡಬೇಕಾಗಿದೆ.


ಸಿದ್ದು ಕರೆತರುವ ಬಗ್ಗೆ ಚರ್ಚೆ
ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ವಸತಿ ಗೃಹದಲ್ಲಿ ಶಾಸಕ ರಮೇಶ್ ಕುಮಾರ್, ಸೇರಿದಂತೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಮತ್ತು ಎಂಎಲ್‌ಸಿಗಳ ನೇತೃತ್ವದಲ್ಲಿ ಬುಧವಾರ ಪೂರ್ವಭಾವಿ ನಡೆಸಿ ಈ ತಿಂಗಳ 25 ರಿಂದ 30ರ ಒಳಗಾಗಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತರುವ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.