ಜಿಲ್ಲೆ

ಕೈ ಭಿನ್ನಮತ ಶಮನಕ್ಕೆ ಮತ್ತೊಂದು ಯತ್ನ: ದೇವನಹಳ್ಳಿಯಲ್ಲಿ ಸಂಧಾನ ಸಭೆ

Kolar

ಎನ್.ಮುನಿವೆಂಕಟೇಗೌಡ ಕೋಲಾರ


ಜಿಲ್ಲಾ ಕಾಂಗ್ರೆಸ್ ನಾಯಕರಲ್ಲಿರುವ ಭಿನ್ನಮತ ಶಮನಗೊಳಿಸುವ ಪ್ರಯತ್ನ ಮುಂದುವರಿದಿದ್ದು, ಶುಕ್ರವಾರ ದೇವನಹಳ್ಳಿ ಬಳಿಯಿರುವ ಗೋಲ್ಡ್‌ಪಿಂಚ್ ರೆಸಾರ್ಟ್‌ನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆದಿದೆ. ಇದರ ಲಾಲಗಳು ಏನಾಗಿವೆ ಎಂಬುದರ ಚರ್ಚೆಗಳು ಕೈ ಕಾರ್ಯಕರ್ತರಲ್ಲಿ ಆರಂಭಗೊಂಡಿವೆ.
ರಾಜ್ಯದಲ್ಲಿ ಭಿನ್ನಮತವಿರುವ ಜಿಲ್ಲೆಗಳ ಹಾಲಿ, ಮಾಜಿ ಶಾಸಕರು, ಎಂಎಲ್‌ಸಿಗಳ ಸಭೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಸಭೆಗೆ ಜಿಲ್ಲೆಯ ನಾಯಕರನ್ನೂ ಆಹ್ವಾನಿಸಲಾಗಿತ್ತು.

ಶುಕ್ರವಾರ ಬೆಳಗ್ಗೆ 10.30ಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರ ಸಭೆಗೆ ಐಸಿಸಿ ಸ್ಕ್ರೀನಿಂಗ್ ಕಮಿಟಿ ಸದಸ್ಯ ಕೆ.ಎಚ್. ಮುನಿಯಪ್ಪ ಅವರನ್ನು ಆಹ್ವಾನಿಸಲಾಗಿತ್ತು. ಮುನಿಯಪ್ಪ ರಾಜ್ಯ ಮತ್ತು ಕೇಂದ್ರ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ತೆರಳಿದ್ದಾರೆ. 10.30ಕ್ಕೆ ಮಾಲೂರು ಶಾಸಕ ನಂಜೇಗೌಡ, ಮಾಜಿ ಶಾಸಕರಾದ ಎ.ನಾಗರಾಜ್, ನಿಸಾರ್ ಅಹ್ಮದ್, ಎಂಎಲ್‌ಸಿಗಳಾದ ಅನಿಲ್‌ಕುಮಾರ್, ನಜೀರ್ ಅಹ್ಮದ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಹಾಜರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿವೆ.
ರಮೇಶ್ ಕುಮಾರ್ ಮತ್ತು ಎಸ್.ಎನ್.ನಾರಾಯಣಸ್ವಾಮಿ ತಮ್ಮಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿರುವುದರಿಂದ ಸಭೆಗೆ ತಡವಾಗಿ ಬರುತ್ತೇವೆಂದು, ಶಾಸಕಿ ರೂಪಕಲಾ ಮುಖಂಡರ ನಿರ್ಧಾರಕ್ಕೆ ಬದ್ಧಳಾಗಿರುತ್ತೇನೆ ಎಂಬ ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ.
ಕೆ.ವೈ.ನಂಜೇಗೌಡ ಸೇರಿದಂತೆ ಉಳಿದವರಿಗೆ ಜಿಲ್ಲೆಯ ಭಿನ್ನಮತ ಬದಿಗೊತ್ತಿ ಮುಂದಿನ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿಯೂ ಪಕ್ಷ ಗೆಲ್ಲಿಸಲು ಪ್ರಯತ್ನಿಸಬೇಕು. ಈಗಾಗಲೇ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಮುಂದಿನ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಎಂಎಲ್‌ಸಿಗಳಿಗೆ ಸುರ್ಜೇವಾಲಾ ಸೂಚಿಸಿದ್ದಾರೆ ಎನ್ನಲಾಗಿದೆ.
ಸಂಜೆ 4.30ಕ್ಕೆ ರಮೇಶ್‌ಕುಮಾರ್ ಸಭೆಗೆ ಆಗಮಿಸಿದ್ದು, ಒಂದು ತಾಸು ಸುರ್ಜೆವಾಲಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ನೀವು ಒಟ್ಟಾಗಿ ಚುನಾವಣೆ ಎದುರಿಸಿದರೆ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು. ಹಳೆಯದನ್ನು ಮರೆಯಬೇಕು.
ಕೆ.ಎಚ್.ಮುನಿಯಪ್ಪ ಅವರಿಗೂ ಇದನ್ನೇ ತಿಳಿಸಿದ್ದೇವೆ ಎಂದು ಸೂಚಿಸಿದ್ದಾರೆ ಎಂದು ಸಭೆಯಲ್ಲಿದ್ದ ಹೆಸರು ಹೇಳಲಿಚ್ಛಿಸದ ಮುಖಂಡರು ತಿಳಿಸಿದ್ದಾರೆ.
ಸಂಜೆ 6.30ನಂತರ ಕೆ.ಎಚ್.ಮುನಿಯಪ್ಪನವರ ಬೆಂಬಲಿಗರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಅವರಿಗೂ ಭಿನ್ನಮತ ಬದಿಗೊತ್ತಿ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಹಿತವಚನ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಹಿಂದಿನ ರಾಜೀ ವಿಫಲ: ಜಿಲ್ಲೆಯಲ್ಲಿ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಗುಂಪಿನ ನಡುವಿನ ಭಿನ್ನಮತವನ್ನು ಕೈ ಹೈಕಮಾಂಡ್ ಸರಿಪಡಿಸಲು ಈಗಾಗಲೇ ಮೂರ‌್ನಾಲ್ಕು ಬಾರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಂತದಲ್ಲಿ ನಡೆಸಿದ ಸಭೆಗಳು ಯಶಸ್ವಿಯಾಗಿಲ್ಲ. ಈ ಸಭೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾರ್ಯಕರ್ತರು ಕಾದು ನೋಡುತ್ತಿದ್ದಾರೆ.

ಒಂದಾಗಲು ಸಾಧ್ಯವೇ…?: ಹೈಕಮಾಂಡ್ ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಶಾಸಕ ರಮೇಶ್ ಕುಮಾರ್ ಗುಂಪುಗಳ ನಡುವೆ ಎಷ್ಟೇ ತೇಪೆ ಹಾಕುವ ಕೆಲಸ ಮಾಡಿದರೂ ಒಬ್ಬರನ್ನೊಬ್ಬರು ನಂಬಲು ಯಾರೂ ಸಿದ್ಧರಿಲ್ಲ. ಲೋಕಸಭೆ ಚುನಾವಣೆ ಸಮಯದಲ್ಲಿ ರಮೇಶ್ ಕುಮಾರ್ ನೇತೃತ್ವದಲ್ಲಿ ರಚನೆಯಾದ ಘಟ್‌ಬಂಧನ್ ಗುಂಪಿಗೆ ಯಾವುದೇ ಸಂದರ್ಭದಲ್ಲಿ ಮುನಿಯಪ್ಪ ಅವರ ಗುಂಪು ಸಹಾಯ ಮಾಡುವುದೂ ಇಲ್ಲ ಎಂಬುದು ಇಬ್ಬರಿಗೂ ತಿಳಿದಿರುವ ಸತ್ಯ ಸಂಗತಿ. ಇಬ್ಬರೂ ಒಂದಾಗಲು ಸಾಧ್ಯವಿದೆಯೇ ಎಂದು ಜಿಲ್ಲೆಯಲ್ಲಿನ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.