ಜಿಲ್ಲೆ

ಜಿಲ್ಲೆಯಲ್ಲಿ ಹುಲ್ಲುಕಡ್ಡಿಯಷ್ಟೂ ಅಭಿವೃದ್ಧಿ ಕೆಲಸವಾಗಿಲ್ಲ: ಮಾಜಿ ಸಚಿವ ಚಲುವರಾಯಸ್ವಾಮಿ ಟೀಕೆ

ಪಾಂಡವಪುರ: ಜಿಲ್ಲೆಯಲ್ಲಿ ಹುಲ್ಲುಕಡ್ಡಿಯಷ್ಟೂ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಆರೋಪಿಸಿದರು.
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲೂಕಿನ ಜಕ್ಕನಹಳ್ಳಿಯಿಂದ ಪಾಂಡವಪುರ ಪಟ್ಟಣದವರೆಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಜನತೆಗೆ ಐದು ವರ್ಷ ಅವಧಿಯಲ್ಲಿ ಯಾವ ರೀತಿ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಟಾನಗೊಂಡಿವೆ ಎಂಬುದು ತಿಳಿದಿದೆ. ಜನಪರ ಕಾರ್ಯಕ್ರಮ ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದಿಂದಲೇ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹನೀಯರನ್ನು ನೆನಪಿಸಿಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಾತಂತ್ರೃ ಹೇಗೆ ಬಂತು ಎಂಬುದನ್ನು ಈ ವೇಳೆ ಜನರಿಗೆ ತಿಳಿಸಿಕೊಡಲಿದ್ದೇವೆ. ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಅದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಬೇರೆ ಪಕ್ಷದ ಮುಖಂಡರು ಪಾದಯಾತ್ರೆ ಬಗ್ಗೆ ಏನೇ ಟೀಕೆ ಮಾಡಿದರೂ ನಾವು ಅದಕ್ಕೆ ಉತ್ತರ ಕೊಡಲ್ಲ. ರಾಷ್ಟ್ರೀಯ ಹಬ್ಬದ ಬಗ್ಗೆ ಸಂತೋಷ ಪಡಬೇಕೆ ಹೊರತು ಟೀಕೆ, ಟಿಪ್ಪಣಿ ಮಾಡಿಕೊಂಡು ರಾಜಕಾರಣ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಾಜಿ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಸಿ.ಡಿ.ಗಂಗಾಧರ, ಹೊನಗಾನಹಳ್ಳಿ ಕೃಷ್ಣೇಗೌಡ ಇತರರಿದ್ದರು.