ಜಿಲ್ಲೆ

ತಳಮಟ್ಟದ ಸಂಘಟನೆಗೆ ಕಾಂಗ್ರೆಸ್ ಸಜ್ಜು

ಗಂಗಾಧರ ಬಿ ವಿ

ಕಾರ್ಯಕರ್ತರಿಗೆ ಡೇರಿ ನಾಮಿನಿ ನಿರ್ದೇಶಕ ಸ್ಥಾನ ಆಯ್ಕೆಗೆ ವೀಕ್ಷಕರ ನೇಮಕ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಬೆನ್ನಲ್ಲೇ ತಾಲೂಕಿನಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಕಾಂಗ್ರೆಸ್ ಸಜ್ಜಾಗಿದೆ. ಇದರ ಮೊದಲ ಹಂತವಾಗಿ ಪಕ್ಷದ ಕಾರ್ಯಕರ್ತರಿಗೆ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಕೊಡಿಸಲು ಕೈ ಮುಂದಾಗಿದೆ.

ಲೋಕಸಭಾ ಚುನಾವಣೆಗೆ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಸಜ್ಜಾಗಿದ್ದು, ಇದು ಸಹಜವಾಗಿಯೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಇದರ ಮಧ್ಯೆ ತಾಲೂಕಿನಲ್ಲಿ ಮತ ಬ್ಯಾಂಕ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಚಿಂತಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ವಿವಿಧ ಕಾರ್ಯತಂತ್ರ ರೂಪಿಸುತ್ತಿದೆ.

ತಳಮಟ್ಟದ ಸಂಘಟನೆಗೆ ಪ್ಲಾನ್!

ಜಿಲ್ಲೆಗೆ ಹೋಲಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಗಣನೀಯವಾಗಿ ಕುಸಿದಿದೆ. ಹಲವಾರು ಕಾರಣಗಳಿಂದ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವ ಅಲುಗಾಡಿದ್ದು, ಕಳೆದ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿರುವುದೇ ಇದಕ್ಕೆ ನಿದರ್ಶನವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಹೀಗೆಯೇ ಮುಂದುವರಿದರೆ, ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಅರಿತಿರುವ ಡಿ.ಕೆ. ಸೋದರರು, ಏನಾದರೂ ಸರಿ ಕ್ಷೇತ್ರದಲ್ಲಿ ತಳಮಟ್ಟದಿಂದಲೇ ಪಕ್ಷ ಸಂಘಟಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇದರ ಮೊದಲ ಹಂತವಾಗಿ ಸಂಸದ ಡಿ.ಕೆ.ಸುರೇಶ್ ಈಗಾಗಲೇ ಜನಸಂಪರ್ಕ ಸಭೆ ಹೆಸರಿನಲ್ಲಿ ತಾಲೂಕಿನ ಜನತೆಯ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ, ರೈತರ ಜೀವನಾಡಿ ಎನಿಸಿರುವ ಹಾಲಿನ ಡೇರಿಗಳ ಆಡಳಿತ ಮಂಡಳಿಗೆ ಪಕ್ಷದ ಕಾರ್ಯಕರ್ತರನ್ನು ನಾಮಿನಿ ನಿರ್ದೇಶಕರನ್ನಾಗಿ ಮಾಡಲು ಮುಂದಾಗಿದ್ದಾರೆ.

ಕಾರ್ಯಕರ್ತನ ಕೈಗೆ ಅಧಿಕಾರ!

ಹಾಲು ಉತ್ಪಾದಕರ ಅಥವಾ ಕೃಷಿ ಪತ್ತಿನ ಸಹಕಾರ ಸಂಘಗಳು ಸರ್ಕಾರದ ಷೇರು ಅಥವಾ ಸರ್ಕಾರದ ಅನುದಾನವನ್ನು ಉಪಯೋಗಿಸಿಕೊಂಡಿದ್ದರೆ, ಆ ಸಂಘಗಳಿಗೆ ಸರ್ಕಾರದಿಂದ ನಾಮಿನಿ ಸದಸ್ಯರನ್ನು ನೇಮಕ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಅವಕಾಶವಿರುವ ಕಡೆ ಡೇರಿಗಳಿಗೆ ಪಕ್ಷದ ಕಾರ್ಯಕರ್ತರನ್ನು ನಾಮಿನಿ ನಿರ್ದೇಶಕರನ್ನಾಗಿ ಮಾಡಲು ಕಾಂಗ್ರೆಸ್ ತಯಾರಿ ನಡೆಸಿದೆ.

ಡೇರಿಗಳಿಗೆ ನಾಮಿನಿ ನಿರ್ದೇಶಕರನ್ನು ಆಯ್ಕೆ ಮಾಡುವ ಸಲುವಾಗಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ನೇತೃತ್ವದಲ್ಲಿ ತಾಲೂಕಿನ 32 ಗ್ರಾಪಂಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಈ ವೀಕ್ಷಕರು ಆಯಾ ಗ್ರಾಪಂ ಸಂಘಟನಾ ಅಧ್ಯಕ್ಷರ ಸಮ್ಮುಖದಲ್ಲಿ ಸಭೆ ನಡೆಸಿ, ಡೇರಿಗಳಿಗೆ ನಾಮಿನಿ ಸದಸ್ಯರನ್ನು ಪಟ್ಟಿ ಮಾಡಿ ಸೆ.25ರೊಳಗೆ ತಲುಪಿಸುವಂತೆ ಈಗಾಗಲೇ ಎಲ್ಲ ವೀಕ್ಷಕರಿಗೆ ಜಿಲ್ಲಾಧ್ಯಕ್ಷರು ಸೂಚಿಸಿದ್ದಾರೆ.

ತಾಲೂಕಿನಲ್ಲಿ ಹಾಲಿನ ಡೇರಿಗಳು ರಾಜಕೀಯ ಪ್ರತಿಷ್ಠೆಯ ಕಣಗಳಾಗಿದ್ದು, ಇಂತಹ ಜಾಗದಲ್ಲಿ ಪಕ್ಷದ ಕಾರ್ಯಕರ್ತನಿಗೆ ಅಧಿಕಾರ ಕೊಡಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಚಿಂತನೆಯಾಗಿದೆ. ಇದಲ್ಲದೆ ಇದು ಪಕ್ಷದ ಸಂಘಟನೆಗೂ ಪೂರಕವಾಗುತ್ತದೆ ಎಂಬುದು ಕಾಂಗ್ರೆಸಿಗರ ಆಲೋಚನೆಯಾಗಿದೆ.

ತಾಲೂಕಿನಲ್ಲಿ 171 ಎಂಪಿಸಿಎಸ್‌ಗಳಿದ್ದು, ಸರ್ಕಾರದ ಅನುದಾನ ಉಪಯೋಗಿಸಿಕೊಂಡಿರುವ ಸಂಘಗಳಿಗೆ ಸರ್ಕಾರಿ ನಾಮಿನಿ ಮಾಡುವ ಅವಕಾಶವಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಬಹುದು ಎಂಬ ಉದ್ದೇಶದಿಂದ ನಾಮಿನಿ ಸದಸ್ಯರನ್ನು ಆಯ್ಕೆ ಮಾಡಲು ವೀಕ್ಷಕರನ್ನು ನೇಮಕ ಮಾಡಿದ್ದೇವೆ. 
ಎಸ್.ಗಂಗಾಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ