ಹುಬ್ಬಳ್ಳಿ : ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತಾಗಿವೆ ಎಂದು ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ದೂರಿದ್ದಾರೆ.
ನಗರದಲ್ಲಿ ಬುಧವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಸೂಚನೆಯಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಜೆ ಹಳ್ಳಿಡಿಜೆ ಹಳ್ಳಿಯ ಗಲಭೆ, ಹಳೇ ಹುಬ್ಬಳ್ಳಿಯ ಗಲಭೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆ ಸ್ಫೋಟ, ಮೈಸೂರು ಗಲಭೆ ರುವಾರಿಗಳು ಅಷ್ಟೇ ಅಲ್ಲ ವಿಧಾನ ಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ ನಾಸಿರ್ ಅಹ್ಮದ್ ಅವರನ್ನು ಪೊಲೀಸರು ಸರಿಯಾಗಿ ವಿಚಾರಣೆ ಮಾಡದೇ ಬಿಟ್ಟು ಕಳಿಸಲಾಗಿದೆ ಎಂದು ದೂರಿದರು.
ಬಿಜೆಪಿ ಮುಖಂಡರನ್ನು ಹಾಗೂ ಹಿಂದುಗಳ ಪರವಾಗಿ ಮಾತನಾಡುವವರನ್ನು ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡಿದ್ದಾರೆ. ಮುಸ್ಲಿಂರ ಒಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್, ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ರಾಜಕಾರಣವನ್ನು ತಕ್ಷಣ ನಿಲ್ಲಿಸಬೇಕು. ಹಿಂದು ಕಾರ್ಯಕರ್ತರಿಗೆ ಅನಗತ್ಯ ಕಿರುಕುಳ ನೀಡಬಾರದು. ಇದು ಹೀಗೆ ಮುಂದುವರೆದರೆ ನಾವೇನು ಸುಮ್ಮನೆ ಕೂಡುವವರಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದರು.
ಛಲವಾದಿ ನಾರಾಯಣ ಸ್ವಾಮಿ, ಹರೀಶ ಪೂಂಜಾ, ಸಿ.ಟಿ. ರವಿ ಅವರ ವಿರುದ್ಧ ಇಲ್ಲಸಲ್ಲದ ಪ್ರಕರಣ ದಾಖಲು ಮಾಡಲಾಗಿದೆ. ಇದಕ್ಕೆಲ್ಲ ಪ್ರತಿಕ್ರಿಯಿಸಬೇಕಿದ್ದ ಗೃಹಸಚಿವರು ಜಾಣಮೌನಕ್ಕೆ ಜಾರಿದ್ದಾರೆ ಎಂದು ಟೀಕಿಸಿದರು.
ಕಲಬುರ್ಗಿಯಲ್ಲಿ ಪ್ರಿಯಾಂಕ್ ಖರ್ಗೆ, ದಕ್ಷಿಣ ಕನ್ನಡದಲ್ಲಿ ಯು.ಟಿ. ಖಾದರ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿ ಬಿ.ಕೆ.ಹರಿಪ್ರಸಾದ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದಾರೆ. ರಿಪಬ್ಲಿಕ್ ಆಫ್ ಕಲಬುರ್ಗಿ, ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡ ಹಾಗೂ ರಿಪಬ್ಲಿಕ್ ಆಫ್ ಬೆಳಗಾವಿ ಮಾಡಿಕೊಂಡು ಸ್ವತಃ ಅವರೇ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಪೊಲೀಸರ ಆಡಳಿತ ಇದೆ. ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ವಸೂಲಿಗೆ ಇಳಿದಿದ್ದಾರೆ. ಇದು ಸಂತೋಷ್ ಲಾಡ್ ಅವರಿಗೆ ತಿಳಿದಿದ್ದರೂ ಮೌನವಾಗಿರುವುದೇಕೆ ಎಂದು ಅರವಿಂದ ಬೆಲ್ಲದ ಪ್ರಶ್ನಿಸಿದರು.
ಸ್ಪೀಕರ್ ಆದವರು ಯಾವುದೇ ರಾಜಕೀಯ ಪಕ್ಷದ ಪರ ಮಾತನಾಡಬಾರದು. ಅದನ್ನು ಯು.ಟಿ.ಖಾದರ್ ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.