ಜಿಲ್ಲೆ

ನಿರ್ಣಯ ರೆಕಾರ್ಡ್ ಮಾಡದಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ : ಬೆಳ್ತಂಗಡಿ ಪಪಂ ಸಾಮಾನ್ಯ ಸಭೆಯಲ್ಲಿ ಆಕ್ರೋಶ : ನೀರು ಪೋಲು ಮಾಡದಂತೆ ಮನವಿ

ಸೌಮ್ಯ ಆರ್

ಬೆಳ್ತಂಗಡಿ: ಬೆಳ್ತಂಗಡಿ ಪಪಂ ಸಾಮಾನ್ಯ ಸಭೆ, ಮಂಗಳವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯ ಜಗದೀಶ್, ಕಳೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಕಾಂಗ್ರೆಸ್ ಸದಸ್ಯರು ಚರ್ಚೆ ಮಾಡಿದ್ದು ಇದನ್ನು ನಿರ್ಣಯದಲ್ಲಿ ರೆಕಾರ್ಡ್ ಮಾಡಿಲ್ಲ. ಇದೇ ರೀತಿ ಮುಂದುವರಿದರೆ ಪ್ರತಿಭಟಿಸಬೇಕಾಗುತ್ತದೆ ಎಂದರು.

ಇದಕ್ಕೆ ಪಪಂ ಅಧ್ಯಕ್ಷ ಜಯಾನಂದ ಗೌಡ ಮುಖ್ಯಾಧಿಕಾರಿಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದರು. ಉತ್ತರಿಸಿದ ಮುಖ್ಯಾಧಿಕಾರಿ ರಾಜೇಶ್, ಎಲ್ಲ ಚರ್ಚೆ ರೆಕಾರ್ಡ್ ಮಾಡಲು ಅವಕಾಶವಿಲ್ಲ. ಕಾರ್ಯಸೂಚಿಗಳನ್ನು ಮಾತ್ರ ರೆಕಾರ್ಡ್ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಸಭೆಯ ಮುಂಚೆ ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದರು. ಆಗ ಆಕ್ರೋಶಗೊಂಡ ಜಗದೀಶ್ ಯಾವಾಗದಿಂದ ಈ ಕ್ರಮ ಜಾರಿಗೆ ಬಂದದ್ದು? ಎಂದು ಪ್ರಶ್ನಿಸಿದರು. ಮುಂದಿನ ಸಭೆಗಳಲ್ಲಿ ಸರಿಪಡಿಸುವ ಬಗ್ಗೆ ಅಧ್ಯಕ್ಷರು ಭರವಸೆ ನೀಡಿದರು.

ಇಂಜಿನಿಯರ್ ಮಹಾವೀರ ಅರಿಗ ಮಾತನಾಡಿ, ಇದು ಸಾರ್ವಜನಿಕರ ಕಚೇರಿ. ಇಲ್ಲಿ ಮಾಹಿತಿಯನ್ನು ಗುಪ್ತವಾಗಿಸುವ ವಿಷಯವಿಲ್ಲ. ಎಲ್ಲ ಮಾಹಿತಿ ಪಾರದರ್ಶಕವಾಗಿದೆ. ಮುಂದಿನ ದಿನಗಳಲ್ಲಿ ಮಾಹಿತಿ ಕೇಳಿದಲ್ಲಿ ನೀಡಲಾಗುವುದು ಎಂದರು.

ಮೂಡ ವಿಚಾರವಾಗಿ ಅಧಿಕಾರಿ ಮೋಕ್ಷಾ ಮಾಹಿತಿ ನೀಡುತ್ತಿದ್ದಂತೆ, ಮೂಡ ನಿಯಮ ಜಾರಿಗೆ ಬಂದು ನಗರದ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದಾಗಿ ಆಡಳಿತದಲ್ಲಿದ್ದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಸದಸ್ಯ ತಿಳಿಸಿದಾಗ ಆಡಳಿತ ಸದಸ್ಯರು ನಕ್ಕರು. ಆಗ ಪ್ರತಿಕ್ರಿಯಿಸಿದ ಜಗದೀಶ್, ಮೂಡ ಕಠಿಣ ನಿಯಮ ಜಾರಿಗೊಳಿಸಲು ಬಿಟ್ಟರೆ ನಿಮಗೂ ಇದೇ ಸ್ಥಿತಿ ಬರಬಹುದು ಎಂದರು. ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ, ಜನ ವಿರೋಧಿ ನಿಯಮ ಬಂದರೆ ಜತೆಯಾಗಿ ಹೋರಾಡೋಣ ಎಂದರು.

ನಗರದಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರಿಗೆ ಟ್ಯಾಂಕ್, ಸಿಂಟೆಕ್ಸ್ ಅಳವಡಿಸಿಕೊಳ್ಳಬೇಕು. ಯಾರೂ ವಾಹನ ತೊಳೆಯಲು, ಕೃಷಿಗೆ ಬಳಸಬಾರದು. ಈ ಬಗ್ಗೆ ಎಲ್ಲ ವಾರ್ಡ್‌ನ ಸದಸ್ಯರಲ್ಲಿ ಮನವರಿಕೆ ಮಾಡಬೇಕೆಂದು ಮುಖ್ಯಾಧಿಕಾರಿ ರಾಜೇಶ್ ಮನವಿ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್, ಮುಖ್ಯಾಧಿಕಾರಿ ರಾಜೇಶ್, ಇಂಜಿನಿಯರ್ ಮಹಾವೀರ ಅರಿಗ ಉಪಸ್ಥಿತರಿದ್ದರು.

ನಗರ ವ್ಯಾಪ್ತಿಗೆ ಪ್ರತ್ಯೇಕ ಫೀಡರ್

ಮೆಸ್ಕಾಂ ಅಧಿಕಾರಿ ಬೂಬ ಶೆಟ್ಟಿ ಮಾಹಿತಿ ನೀಡುತ್ತಿದ್ದಂತೆ ಅಧ್ಯಕ್ಷ ಜಯಾನಂದ ಗೌಡ ಮಾತನಾಡಿ, ನಗರದಲ್ಲಿ ಕುಡಿಯುವ ನೀರು ಪ್ರಮುಖವಾಗಿದ್ದು ಈ ಘಟಕಗಳಲ್ಲಿ ವಿದ್ಯುತ್ ಲೋಪ ಕಂಡುಬಂದರೆ ಮೆಸ್ಕಾಂ ತಕ್ಷಣ ಸ್ಪಂದಿಸಬೇಕು. ನಗರ ವ್ಯಾಪ್ತಿಗೆ ಪ್ರತ್ಯೇಕ ಫೀಡರ್ ಅಳವಡಿಸುವ ಬಗ್ಗೆ ಹಿಂದಿನ ಅಧಿಕಾರಿ ತಿಳಿಸಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳಿ. ಮಳೆಗಾಲದ ಮುಂಚೆ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿದರು.

ಬೇರೆ ನಿವೇಶನದಲ್ಲಿ ಮನೆ ಕಟ್ಟುವ ಫಲಾನುಭವಿಗಳು

ಬಿ ಖಾತಾ ಪಡೆದ ನಿವೇಶನದಲ್ಲಿ ಪಪಂನಿಂದ ಪರವಾನಗಿ ನೀಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಎಲ್ಲ ಸದಸ್ಯರು ಒತ್ತಾಯಿಸಿದರು. ಆಶ್ರಯ ಕಾಲನಿಯಲ್ಲಿ ನಿವೇಶನ ಸೂಚಿಸಿದ ಸ್ಥಳದಲ್ಲಿ ಕೆಲವರು ಮನೆಕಟ್ಟದೆ ಬೇರೆ ನಿವೇಶನದಲ್ಲಿ ಮನೆಕಟ್ಟಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಜಯಾನಂದ ಗೌಡ ಉತ್ತರಿಸಿ, ಇದರಿಂದ ಮುಂದಿನ ದಿನಗಳಲ್ಲಿ ಅಪಾಯವಾಗುವ ಲಕ್ಷಣವಿದ್ದು ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್‌ಗೆ ಸೂಚಿಸಿದರು.