ಕಲಬುರಗಿ: ಬಿಜೆಪಿ ದುರಾಡಳಿತದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ಕಲಬುರಗಿಯಲ್ಲಿ ರಾಧಾಕೃಷ್ಣರನ್ನು ಗೆಲ್ಲಿಸಿ, ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇದಕ್ಕಾಗಿ ಕಾರ್ಯಕರ್ತರು ೩೦ದಿನ ಕಷ್ಟಪಟ್ಟರೆ ಐದು ವರ್ಷದ ನೆಮ್ಮದಿಯ ಜೀವನಕ್ಕೆ ಗ್ಯಾರಂಟಿ ಕೊಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇವೆ. ಹಿಂದಿನ ಶೇ.40 ಪರ್ಸೆಂಟ್ ಬಿಜೆಪಿ ಸರ್ಕಾರ ಒಂದು ಯೋಜನೆ ಜಾರಿಗೆ ತಂದಿದ್ದರೆ ತಿಳಿಸಲಿ. ಕಾಂಗ್ರೆಸ್‌ದು ರೀಲ್ ಬಿಜೆಪಿಯದ್ದು ರಿಯಲ್ ಎಂದು ಜಾಧವ್ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಜನರಿಗೆ ತಲುಪುತ್ತಿವೆ ಅದು ರಿಯಲ್. ಇದರ ಬಗ್ಗೆ ಚರ್ಚೆಗೆ ಸಿದ್ಧವಿದ್ದೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆಗೆ ತಲುಪಿಸಬೇಕು. ಆ ಮೂಲಕ ಜನರ ಬಳಿ ಮತ ಯಾಚಿಸಬೇಕು ಎಂದು ಹೇಳಿದರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿರುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ಬರ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರು ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದಾಗಿ ನಂಬಿಸಿ ಡಾ.ಉಮೇಶ ಜಾಧವ್ ಬಿಜೆಪಿಗೆ ಕರೆದುಕೊಂಡು ಹೋದ. ಆದರೆ ಮೋಸ ಮಾಡಿದ. ದೇಶದಲ್ಲಿಯೇ ಅತಿ ಹೆಚ್ಚು ಸುಳ್ಳು ಹೇಳುವ ಎಂಪಿ ಜಾಧವ್‌ನನ್ನು ಸುಳ್ಳಿನ ಯೂನಿವರ್ಸಿಟಿ ಉಪಕುಲಪತಿ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರಾದ ಡೇವಿಡ್ ಸಿಮೆಯೋನ, ಶರಣಪ್ಪ ಮಟ್ಟೂರು, ಚಂದ್ರಿಕಾ ಪರಮೇಶ್ವರಿ, ಶರಣಕುಮಾರ ಮೋದಿ, ನೀಲಕಂಠರಾವ ಮೂಲಗೆ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೇಲ್, ಸಂತೋಷ ಪಾಟೀಲ್ ದಣ್ಣೂರ, ಮಜರ್ ಅಲಂ ಖಾನ್, ಡಾ.ಕಿರಣ ದೇಶಮುಖ, ಪ್ರವೀಣ ಹರವಾಳ, ಫಾರೂಖ್ ಇತರರಿದ್ದರು.