ಜಿಲ್ಲೆ

ಬಿಜೆಪಿಯಿಂದಲೇ ಪೆನ್‌ಡ್ರೈವ್ ಹೊರಬಂದಿದೆ: ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ..!

ಕೆ.ಎನ್.ರಾಘವೇಂದ್ರ

ಮಂಡ್ಯ: ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕುಟುಂಬ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರಾಜೇಗೌಡ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದರು. ಆದರೆ ಅದನ್ನ ಮಾರ್ಕೆಟ್ ಮಾಡಿದ್ದು ಬಿಜೆಪಿ. ಈ ಮೂಲಕ ಜೆಡಿಎಸ್ ಮುಗಿಸಿ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಳ್ಳುತ್ತದೆ ಎಂದು ವ್ಯಂಗ್ಯವಾಡಿದರು.

ಈ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಕೈವಾಡವಿಲ್ಲ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರನ್ನ ಕಳುಹಿಸಿ ಏಕೆ ಷಡ್ಯಂತ್ರ ಹೂಡಿರಬಾರದು. ಇದಲ್ಲದೆ ಈ ಕೇಸ್‌ನಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕನ ಕೈವಾಡ ಇದೆ. ರಾಜ್ಯ ಬಿಜೆಪಿ ಅತ್ಯುತ್ತಮ ಸ್ಥಾನದಲ್ಲಿ ಕುಳಿರುವ ನಾಯಕ ಶಾಮೀಲು. ಅವರಿಬ್ಬರು ಸೇರಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಪೆನ್‌ಡೈವ್ ಹಂಚಿದ್ದಾರೆ ಎಂದು ಪ್ರೀತಂಗೌಡ ವಿರುದ್ಧ ಆರೋಪಿಸಿದರು.

ಎಚ್.ಡಿ.ರೇವಣ್ಣ ಕುಟುಂಬದ ರಾಜಕೀಯ ವಿರೋಧಿಯೇ ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಆದರೀಗ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ. ದೇವರಾಜೇಗೌಡನ ೆನ್ ಕಾಲ್ ಟ್ರ್ಯಾಪ್ ಮಾಡಿದರೆ ಎಲ್ಲ ಗೊತ್ತಾಗಲಿದೆ. ಈ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಜೆಡಿಎಸ್ ಮಟ್ಟಹಾಕಲು ಬಿಜೆಪಿ ಮಾಡಿರುವ ತಂತ್ರ. ಜೆಡಿಎಸ್ ಪಕ್ಷವನ್ನ ಮುಗಿಸಲು ಬಿಜೆಪಿ ತನ್ನ ಕೋಟೆಯನ್ನ ಭದ್ರಪಡಿಸಿಕೊಳ್ಳುತ್ತಿದೆ. ಪ್ರಭಾವಿಯಾಗಿರುವುದರಿಂದ ಡಿಕೆಶಿ ತಲೆಗೆ ಕಟ್ಟಲು ನೋಡುತ್ತಿದ್ದಾರೆ. ಸಿಬಿಐಗೆ ಪ್ರಕರಣ ವರ್ಗಾಯಿಸಲು ಆಗ್ರಹಿಸುತ್ತಿದ್ದಾರೆ. ಆದರೆ ಕರ್ನಾಟಕ ಪೊಲೀಸ್ ಹಾಗೂ ಎಸ್‌ಐಟಿ ಅಧಿಕಾರಿಗಳು ದಕ್ಷರಿದ್ದಾರೆ. ಅವರೇ ಎಲ್ಲವನ್ನೂ ಹೊರ ತರುತ್ತಾರೆ ಎಂದರು.