ಜಿಲ್ಲೆ

ಕಾಂಗ್ರೆಸ್ ದುರಾಡಳಿತ ಮಿತಿ ಮೀರಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಹಣ ಹಾಗೂ ದುರಾಡಳಿತದ ಪ್ರಭಾವದಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಅಂದು ಕೊಂಡಿತ್ತು. ಅದಕ್ಕೆ ವ್ಯತಿರಿಕ್ತವಾಗಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಜನ ಆಶೀರ್ವಾದ ಮಾಡುವ ವಿಶ್ವಾಸ ನಮಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಹಿನ್ನೆೆಲೆಯಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಹಾಗೂ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಹಣದಿಂದ ಎಲ್ಲವನ್ನು ಗೆಲ್ಲಬಹುದು ಎಂದು ಕಾಂಗ್ರೆಸ್ ಅಂದುಕೊಂಡಿದೆ. ಅದಕ್ಕಾಗಿ ಲೋಕಸಭೆಯಲ್ಲಿ ಗೆಲ್ಲಲು ನಾನಾ ತಂತ್ರ ಬಳಸಿದ್ದಲ್ಲದೇ ಆಡಳಿತ ದುರುಪಯೋಗಪಡಿಸಿಕೊಂಡಿದೆ. ಆದರೂ ಜನರು ಬಿಜೆಪಿ, ಜೆಡಿಎಸ್ ಅನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ನಾನಲ್ಲ. ಹಾಗಾಗಿ, ಬಿಜೆಪಿ ಕ್ಷೇತ್ರ ಬಿಟ್ಟುಕೊಟ್ಟಿದೆ. ಇದೀಗ ವಿವೇಕಾನಂದ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಆಕಾಂಕ್ಷಿಗಳು ಸಹ ಹಿಂದೆ ಸರಿದು ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕೋರಿದರು.
ಬಿಜೆಪಿ -ಜೆಡಿಎಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಸುವರ್ಣಯುಗವಿತ್ತು ಎಂದರೆ ತಪ್ಪಾಗುವುದಿಲ್ಲ. ಶಿಕ್ಷಕರಿಗೆ ವೇತನ ಆಯೋಗವನ್ನು ಜಾರಿಗೆ ತರಲಾಯಿತು. ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಮೀಸಲಿಟ್ಟು ಕೋವಿಡ್ ಸಂದರ್ಭದಲ್ಲಿ ಯಾವ ಶಿಕ್ಷಕರ ಸಂಬಳವನ್ನೂ ಕಡಿತ ಮಾಡಲಿಲ್ಲ. ಆದರೆ ಇಂದಿನ ಸರ್ಕಾರಕ್ಕೆೆ ಆ ಕಳಕಳಿ ಇಲ್ಲ, ಆಸಕ್ತಿಯೂ ಇಲ್ಲ. ಗ್ಯಾರಂಟಿ ಹೆಸರು ಕೇಳಿ-ಕೇಳಿ ತಲೆ ಚಿಟ್ಟು ಹಿಡಿಸುವಂತೆ ಮಾಡಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ಗ್ಯಾರಂಟಿಯ ಬಗ್ಗೆೆ ಗೊತ್ತಾಗುತ್ತದೆ ಎಂದು ಅವರು ಅಸಹನೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವೊಂದು ಒಳ್ಳೆಯ ಕೆಲಸ ಮಾಡಿಲ್ಲ. ಮಾಡುವ ಯೋಗ್ಯತೆಯೂ ಅವರಿಗಿಲ್ಲ. ಬರಿ ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಎನ್‌ಇಪಿ ಜಾರಿಗೊಳಿಸಿದರು. ಆದರೆ, ಈ ಪುಣ್ಯಾತ್ಮರು ಸರ್ಕಾರ ಬಂದ ಮೊದಲ ತಿಂಗಳಲ್ಲಿಯೇ ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ ಎನ್‌ಇಪಿ ಬದಲು ಎಸ್‌ಇಪಿ ತರಲು ಹೊರಟಿದ್ದಾರೆ ಎಂದು ಟೀಕಿಸಿದರು.
ಶಿಕ್ಷಣ ಸಚಿವರ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು. ತುಮಕೂರಿಗೆ ಹೋದಾಗ ಶಿಕ್ಷಕರು ಒಬ್ಬರು ಲೋಕಸಭೆ ಚುನಾವಣೆ ಮುಗಿದ ಮೇಲೆ ಶಿಕ್ಷಣ ಸಚಿವರನ್ನು ಬದಲಿಸಿ ಎಂದು ಮನವಿ ಮಾಡಿದರು. ಸಚಿವರ ನಡವಳಿಕೆ ನೋಡಿದರೆ ನಾವು ಕರ್ನಾಟಕದಲ್ಲಿ ಇದ್ದೇವೆ ಅನ್ನುವುದು ಮರೆತುಬಿಟ್ಟಿದ್ದಾರೆ. ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೆ ಕನ್ನಡ ಬರಬೇಕು ಎಂದು ಕಾನೂನು ಎಲ್ಲಿದೆ ಎನ್ನುತ್ತಾರೆ. ಇಂಥ ಶಿಕ್ಷಣ ಸಚಿವರನ್ನು ಪಡೆದ ನಾವೇ ಧನ್ಯರು. ಒಂದಂತೂ ಸತ್ಯ ಶಿಕ್ಷಣ ಕ್ಷೇತ್ರ ಶಿಕ್ಷಕರ ಕ್ಷೇತ್ರ ಹದಗೆಟ್ಟಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಇಡುವ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಕಾಂಗ್ರೆೆಸ್ 136 ಶಾಸಕರು ಇರುವುದರಿಂದ ಅವರು ಏನು ಹೇಳುತ್ತಾಾರೋ ಅದೇ ನಡೆಯುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾತೆ ಅಂತಿಮವಾಗುತ್ತದೆ. ನಮಗೆ ಸಂಖ್ಯಾ ಬಲವಿಲ್ಲ. ನಾವು ಕಷ್ಟಕಾಲದಲ್ಲಿ ಇದ್ದೇವೆ. ಆದ್ದರಿಂದ ಅವರ ಮುಂದೆ ನಾವು ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಈ ಚುನಾವಣೆ ನಮಗೆ ಪ್ರತಿಷ್ಠೆೆಯಾಗಿದೆ ಎಂದು ಪಕ್ಷದ ಪ್ರಮುಖರನ್ನು ಹುರಿದುಂಬಿಸಿದರು.
ಮೈತ್ರಿ ಪಕ್ಷಗಳ ಕಾರ್ಯಕರ್ತರು ಹಾಗೂ ಪ್ರಮುಖರು ನನ್ನನ್ನು ಕರೆದಿಲ್ಲ, ನನ್ನನ್ನು ಯಾರು ಮಾತನಾಡಿಸಿಲ್ಲ ಎಂದು ಕುಳಿತುಕೊಂಡರೆ ಆಗುವುದಿಲ್ಲ. ನಾವು ಚುನಾವಣೆಯಲ್ಲಿ ಗೆಲ್ಲಲೇ ಬೇಕಾಗಿದೆ. ಕಾಂಗ್ರೆೆಸ್ಸಿನ ಸಣ್ಣ-ಪುಟ್ಟ ಕಾರ್ಯಕರ್ತರನ್ನು ಮಾತನಾಡಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಪಕ್ಷಕ್ಕೆ ಒಂದು ಘನತೆಗಾಗಿ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಓಡಾಡುತ್ತಿದ್ದಾರೆ. ನಮ್ಮಲ್ಲಿ ಇರುವ ಭಿನ್ನಾಭಿಪ್ರಾಯಗಳ ಬದಿಗಿಟ್ಟು ಒಗ್ಗಟ್ಟಾಗಿ ಗೆಲ್ಲಬೇಕಿದೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ. ವಿಧಾನಪರಿಷತಿನ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಸಾ.ರಾ.ಮಹೇಶ್, ಎಲ್.ನಾಗೇಂದ್ರ, ಸಿ,ಎಸ್.ನಿರಂಜನಕುಮಾರ್, ಮಾಜಿ ಸಂಸದ ಸಿ.ಎಚ್.ವಿಜಯ್ ಶಂಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ ರಾಜೇಂದ್ರ, ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿದ್ದರಾಜು, ತೋಂಟದಾರ್ಯ, ಬಿಜೆಪಿ ಗ್ರಾಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಾಮಿ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಆರ್ ಲಿಂಗಪ್ಪ, ಎಂ.ಜೆ .ರವಿಕುಮಾರ್, ಶಿವಕುಮಾರ್, ಮುಖಂಡರಾದ ಮೈ.ವಿ ರವಿಶಂಕರ್, ಡಾ. ಈ.ಸಿ.ನಿಂಗರಾಜು, ಕೇಬಲ್ ಮಹೇಶ್, ಬಿ.ಎಂ.ರಘು, ಗಿರಿಧರ್, ಕಿರಣ್, ಜಯರಾಮ್ಗೌಡ ಇತರರು ಇದ್ದರು.