ಮಂಗಳೂರು : ನಗರದ ಕಂಕನಾಡಿ ಮಸೀದಿ ಬಳಿಯ ರಸ್ತೆಯಲ್ಲಿ ನಮಾಜು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗ ಬುಧವಾರ ಮಂಗಳೂರು ಪೊಲೀಸ್
ಆಯುಕ್ತ ಅನುಪಮ್ ಅಗರವಾಲ್ ಅವರನ್ನು ಭೇಟಿಯಾಗಿ ಪ್ರಕರಣ ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಜಿಲ್ಲೆಯಲ್ಲಿ ಇದುವರೆಗೆ ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳು ನಡೆದಾಗ ಇಲ್ಲದ ಸುಮೋಟೊ
ಕೇಸ್ ಕೇವಲ 3 ನಿಮಿಷ ಮಸೀದಿಗೆ ತಾಗಿದ ರಸ್ತೆಯಲ್ಲಿ ನಮಾಜು ಮಾಡಿದವರ ಮೇಲೆ ಪೊಲೀಸರು ಹಾಕಿದ್ದಾರೆ. ಪೊಲೀಸರು
ಮಾಡಿದ ಕೃತ್ಯದಿಂದಾಗಿ ಮುಸ್ಲಿಂ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ಪೊಲೀಸರ ತಾರತಮ್ಯ ನೀತಿಯು ಅತಿರೇಕದ ಪರಮಾವಧಿ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.
ಈ ಬಗ್ಗೆ ವಿಧಾನ ಸಭಾಧ್ಯಕ್ಷ, ಗೃಹಸಚಿವ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದ್ದು, ತಕ್ಷಣ ಕೇಸ್ ವಾಪಸ್ ಪಡೆಯುವುದಾಗಿ ಕಮಿಷನರ್ ಅನುಪಮ್ ಅಗರವಾಲ್ ಭರವಸೆ ನೀಡಿದ್ದಾರೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ನಿಯೋಗ ಪ್ರಕಟಣೆಯಲ್ಲಿ ತಿಳಿಸಿದರ.
ನಿಯೋಗದಲ್ಲಿ ಕೆ.ಕೆ.ಶಾಹುಲ್ ಹಮೀದ್, ಇಬ್ರಾಹಿಂ ಕೋಡಿಜಾಲ್, ಕಣಚೂರು ಮೋನು, ಎಂ.ಎಸ್.ಮಹಮ್ಮದ್, ಮಾಜಿ ಮೇಯರ್ ಕೆ.ಅಶ್ರಫ್, ಕಾರ್ಪೊರೇಟರ್‌ಗಳಾದ ಲತೀಫ್ ಕಂದಕ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.