ಜಿಲ್ಲೆ

ಬಿಜೆಪಿಯಿಂದ ಮತದಾರರ ಪಟ್ಟಿ ದುರುಪಯೋಗ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆರೋಪ

reportermys

ಕೆ.ಆರ್.ಪೇಟೆ: ಮತದಾರರ ಪಟ್ಟಿಯನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ. ಹೀಗಾಗಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹಾಗೂ ಮನೆ ಬಾಗಿಲಿಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಸರಿಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಬ್ಲಾಕ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಗುರುತಿಸಿ ಬೂತ್ ಏಜೆಂಟ್ ನೇಮಕ ಮಾಡಿ. ಅವರಿಂದ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ರಾಜಕೀಯ ಪಕ್ಷದ ಬೂತ್ ಏಜೆಂಟ್‌ರಿಂದ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ತೆಗೆದು ಹಾಕುವ ಅವಕಾಶವಿದೆ ಎಂದರು.

ಬೆಂಗಳೂರಿನಲ್ಲಿ ಕಾಂಗ್ರೆಸ್‌ಗೆ ಮತ ಹಾಕುವವರ ಹೆಸರನ್ನು ಬಿಜೆಪಿಯು ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಕಾಂಗ್ರೆಸ್ ಹೋರಾಟದಿಂದ ಚುನಾವಣೆ ಆಯೋಗದ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೀಗಾಗಿ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದು ಬೇಡ. ಚುನಾವಣೆಗೆ ಕೇವಲ 4 ತಿಂಗಳು ಮಾತ್ರ ಬಾಕಿ ಇದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಬಹುದು. ಹೀಗಾಗಿ ಬೂತ್ ಮಟ್ಟದಿಂದಲೇ ಪಕ್ಷವನ್ನು ಸಂಘಟಿಸಬೇಕಿದೆ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಬಂದರೇ ಕರ್ನಾಟಕದಲ್ಲಿ ಕಾಂಗ್ರೆಸ್ ಬಂದಂತೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ನಾಗೇಂದ್ರಕುಮಾರ್, ಮುಖಂಡ ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಆದಿಹಳ್ಳಿ ಮೀನಾಕ್ಷಮ್ಮ ಇದ್ದರು.