ಜಿಲ್ಲೆ

ಸರ್ವ ಜನಾಂಗವನ್ನು ಸಮನಾಗಿ ಕಾಣುವ ಪಕ್ಷ ಕಾಂಗ್ರೆಸ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ಮುಂದಿನ ಲೋಕಸಭಾ ಚುನಾವಣೆ ಕಾಂಗ್ರೆಸ್​ ಪಕ್ಷದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಕಾರ್ಯಕರ್ತರು ನಾಯಕರಾಗಿ ಕೆಲಸ ಮಾಡಬೇಕು. ಪಕ್ಷವು ಎಲ್ಲಾ ಜಾತಿ&ಧರ್ಮವನ್ನು ಸಮಾನವಾಗಿ ಕಾಣುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್​ ಹೇಳಿದ್ದಾರೆ.

ಬ್ರಹ್ಮಗಿರಿ ಬಳಿಯ ಉಡುಪಿ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜಯಪ್ರಕಾಶ್​ ಹೆಗ್ಡೆ ಅವರು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಬಲ ಬಂದಿದೆ. ಬಿಜೆಪಿ ಕಳೆದ 10 ವರ್ಷಗಳಲ್ಲಿ ಜನರಿಗೆ ಮೋಸ ಮಾಡಿದ್ದು, ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ಕಾಂಗ್ರೆಸ್​ ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದ್ದು, ಬಡವರ ಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್​ ಕುಮಾರ್​ ಸೊರಕೆ ಮಾತನಾಡಿ, ಕಾಂಗ್ರೆಸ್​ ನಾಯಕರನ್ನು ಸಿಬಿಐ, ಇಡಿ ಮೂಲಕ ಹೆದರಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿದೆ. ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುತ್ತಿದೆ. 2 ರಾಜ್ಯದ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದೆ. ಪ್ರಸ್ತುತ ಕಾಲಟ್ಟದಲ್ಲಿ ಚುನಾವಣಾ ಆಯೋಗಕ್ಕೆ ಮಹತ್ವವಿಲ್ಲ. ಮಾಧ್ಯಮಗಳು ಮೋದಿ ಪರ ಪ್ರಚಾರ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಮಾಜಿ ಸಚಿವೆ ಮೋಟಮ್ಮ, ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ಜಿ.ಎಚ್​. ಶ್ರೀನಿವಾಸ್​, ಎಚ್​.ಡಿ. ತಮ್ಮಯ್ಯ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ. ಅಂಶುಮಂತ್​, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್​, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಸುಕುಮಾರ ಶೆಟ್ಟಿ, ಮುಖಂಡರಾದ ಪ್ರಸಾದ್​ ರಾಜ್​ ಕಾಂಚನ್​, ಉದಯ್​ ಕುಮಾರ್​ ಶೆಟ್ಟಿ, ದಿನೇಶ್​ ಹೆಗ್ಡೆ ಮೊಳಹಳ್ಳಿ ಭಾಗವಹಿಸಿದ್ದರು.

2012ರ ಉಪಚುನಾವಣೆಯಲ್ಲಿ ಗೆದ್ದ ಬಳಿಕ 20 ತಿಂಗಳಲ್ಲಿ ಜಿಲ್ಲೆಯ ಜನತೆಗಾಗಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ತೀರ್ಥಹಳ್ಳಿ&ಮಲ್ಪೆ, ಕಡೂರು&ಬಿಸಿರೋಡ್​, ತುಮಕೂರು&ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಅನುಮೋದನೆ ಪಡೆದುಕೊಳ್ಳಲಾಗಿತ್ತು. 10 ವರ್ಷವಾದರೂ ಈ ರಸ್ತೆಗಳು ಸಂಪೂರ್ಣವಾಗಿಲ್ಲ. ಬಯಲು ಸೀಮೆ, ಮಲೆನಾಡು, ಕರಾವಳಿ ಭಾಗದ ಜನರ ಸಮಸ್ಯೆಗಳು ಪ್ರತ್ಯೇಕವಾಗಿದ್ದು, ಅದನ್ನು ಅರ್ಥಮಾಡಿಕೊಂಡಿದ್ದೇನೆ. ಕರಾವಳಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಿದ್ದು, ಹಿಂದಿನ ಕೆಲಸವನ್ನು ಶ್ರೀದಲ್ಲಿ ಪೂರ್ಣಗೊಳಿಸಲು ಜನತೆ ಮತ ನೀಡಬೇಕು.-ಕೆ. ಜಯಪ್ರಕಾಶ್​ ಹೆಗ್ಡೆ, ಕಾಂಗ್ರೆಸ್​ ಅಭ್ಯರ್ಥಿ