ಜಿಲ್ಲೆ

ಅಂತರ್ಜಲ ವೈಜ್ಞಾನಿಕ ಸಮೀಕ್ಷೆಗೆ ವಾಟರ್ ಆಡಿಟ್ ಕಮಿಟಿ ರಚನೆ -ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

Mangaluru - Hariprasad Rai



ಮಂಗಳೂರು : ಕರಾವಳಿ ಭಾಗದಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ವೈಜ್ಞಾನಿಕ ಸಮೀಕ್ಷೆ ನಡೆಸಲು ಇಸ್ರೊ ಸಹಿತ ವಿವಿಧ ತಜ್ಞರ ನೇತೃತ್ವದಲ್ಲಿ ವಾಟರ್ ಆಡಿಟ್ ಕಮಿಟಿ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಹಾಗೂ ದ.ಕ. ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ನಡೆದ ಪಂಚಾಯತ್‌ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘ಕರಾವಳಿ ಭಾಗದಲ್ಲಿ ಕಳೆದ ಒಂದು ದಶಕದಿಂದ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಈ ಬಗ್ಗೆ ಪೂರ್ಣವಾಗಿ ಅಧ್ಯಯನ ಮಾಡಿ ಕೆಲವೇ ತಿಂಗಳಲ್ಲಿ ವರದಿ ಪಡೆದು ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಪಂಚತಂತ್ರ-2 ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಗ್ರಾಮ ಪಂಚಾಯಿತಿಗೆ
ಪಂಚಾಯತ್‌ಗೆ ಸಂಬಂಧಿಸಿ ಜನರ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪಂಚಮಿತ್ರ ಎಂಬ ಕಾಲ್ ಸೆಂಟರ್ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ಪಂಚಾಯಿತಿಗಳು ಸರ್ಕಾರದ ಅನುದಾನದ ಜತೆಗೆ ಸಂಪನ್ಮೂಲ ಸೃಷ್ಟಿಗೆ ಆದ್ಯತೆ ನೀಡಬೇಕಿದೆ.
ಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹ-ಸಂಸ್ಕರಣೆಯನ್ನು ಸ್ವಸಹಾಯ ಸಂಘದ ಸಹಕಾರದೊಂದಿಗೆ ವಾಣಿಜ್ಯ ಮಾದರಿಯಲ್ಲಿ ರೂಪಿಸುವ ವಿಶೇಷ ಪರಿಕಲ್ಪನೆ ಶೀಘ್ರ ಜಾರಿಯಾಗಲಿದೆ. ಎಲ್ಲ ಪಂಚಾಯಿತಿಗಳಲ್ಲಿ ಸುಸಜ್ಜಿತ ಗ್ರಂಥಾಲಯ ಇರುವ ಅರಿವು ಕೇಂದ್ರ ಆರಂಭಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ ಆಡಳಿತ ವಿಕೇಂದ್ರಿಕರಣ ಮಾಡುವ ಮೂಲಕ ಕಾಂಗ್ರೆಸ್ ಹೊಸ ನಾಯಕತ್ವ ಬೆಳೆಸುವಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಆದರೆ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನೆ ನೆಪವೊಡ್ಡಿ ಮುಂದೂಡಿದೆ. ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ 5ವರ್ಷ ಇರಬೇಕು ಹಾಗೂ ಮೀಸಲಾತಿ 2 ಬಾರಿಗೆ ಒಂದೇ ಇರಲಿ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ‘ ಕೇರಳ ಮಾದರಿಯಲ್ಲಿ ಪಕ್ಷದ ಚಿಹ್ನೆಯಲ್ಲಿ ಗ್ರಾ.ಪಂ. ಚುನಾವಣೆಯನ್ನು ನಡೆಸಬೇಕಿದೆ. 25 ಎಕರೆ ಜಾಗವನ್ನು ಗ್ರಾ.ಪಂಗೆ ಮೀಸಲಿಡಬೇಕು. ವಸತಿ ಯೋಜನೆಗೆ 5 ಲಕ್ಷ ರೂ. ಸಹಾಯಧನ ನೀಡಬೇಕು. ಪಿಡಿಒಗಳನ್ನು ಆಯಾ ಜಿಲ್ಲೆಯವರನ್ನೆ ನಿಯೋಜಿಸಬೇಕುಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಬಿ.ರಮಾನಾಥ ರೈ , ಅಭಯಚಂದ್ರ ಜೈನ್, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕಾಂಗ್ರೆಸ್ ಪ್ರಮುಖರಾದ ಇನಾಯತ್ ಆಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ, ಪ್ರವೀಣ್‌ಚಂದ್ರ ಆಳ್ವ, ಎಂ.ಶಶಿಧರ ಹೆಗ್ಡೆ, ಪದ್ಮರಾಜ್ ಆರ್., ಜಿ.ಎ. ಬಾವ, ಬಿ.ಎಚ್.ಖಾದರ್, ಸುರೇಶ್ ಬಲ್ಲಾಳ್, ಅಶ್ವಿನ್ ಕುಮಾರ್, ಶಾಲೆಟ್ ಪಿಂಟೊ, ಲುಕ್ಮಾನ್, ಸುಹಾನ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.