ಹುಬ್ಬಳ್ಳಿ : ದೇಶದ ಸಂಕಷ್ಟ ಮತ್ತು ಸಾಧನೆಯ ಸಮಯದಲ್ಲಿ ಕಾಂಗ್ರೆಸ್ನವರು ಯಾವಾಗಲೂ ವಿರುದ್ಧವಾಗಿ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶವನ್ನು ಅತಿ ಹೆಚ್ಚು ಅವಧಿಯವರೆಗೆ ಆಳಿರುವ ಕಾಂಗ್ರೆಸ್, ತನ್ನ ಅಧಿಕಾರದ ಅವಧಿಯಲ್ಲಿ ಸೈನ್ಯವನ್ನು ಬಲಿಷ್ಠಗೊಳಿಸುವ ಕೆಲಸ ಮಾಡಲಿಲ್ಲ ಎಂದು ದೂರಿದರು.
ಭಾರತೀಯ ಸೇನೆ ಇಂದು ಸ್ವಾವಲಂಬಿಯಾಗಿದೆ. ಆದರೂ, ಕಾಂಗ್ರೆಸ್ ಮುಖಂಡರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುದ್ಧ ಬೇಡವೆಂದು ಯಾವ ಕಾರಣಕ್ಕೆ ಹೇಳಿದರು? ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತಾ ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಭಾರತೀಯ ಸೈನ್ಯಕ್ಕೆ ಯಾವುದೇ ಸೌಲಭ್ಯ ಒದಗಲಿಸಲಿಲ್ಲ. ಉರಿ ಘಟನೆ ನಡೆದಾಗಲೂ ಸೈನ್ಯದ ಬಗ್ಗೆ ಪ್ರಶ್ನಿಸಿದ್ದ ಕಾಂಗ್ರೆಸ್ ಮುಖಂಡರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನೂ ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತದ ಭೂಮಿ ಬಿಟ್ಟುಕೊಡಲಾಯಿತು. ಆದರೆ, ಪ್ರಧಾನಿ ಮೋದಿ ಅವಧಿಯಲ್ಲಿ ದೇಶದ ಒಂದಿಂಚು ಭೂಮಿಯನ್ನೂ ವಿದೇಶಕ್ಕೆ ಬಿಟ್ಟುಕೊಡಲಿಲ್ಲ. ಚೀನಾ ವಸ್ತುಗಳನ್ನು ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಲೆಕ್ಕಿಸದೆ, ಭಾರತದ ಹಿತಾಸಕ್ತಿ ಕಾಯ್ದುಕೊಳ್ಳಲಾಗುತ್ತಿದೆ ಎಂದರು.