ಜಿಲ್ಲೆ

ದಲಿತ ವ್ಯಕ್ತಿಯ ಸಾವಿನಲ್ಲಿ ದ್ವೇಷದ ರಾಜಕಾರಣ, ಕಾಂಗ್ರೆಸ್ ನಾಯಕರ ಹುನ್ನಾರ

ಚಿಕ್ಕಬಳ್ಳಾಪುರ: ಚಾಲಕ ಬಾಬು ಡೆತ್‌ ನೋಟ್‌ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದರೂ ಆಗಲೇ ಅವರ ಕುಟುಂಬದವರು, ಸ್ಥಳೀಯ ಅಧಿಕಾರಿಗಳು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿ, ಪ್ರಾಣ ಉಳಿಸಲಿಲ್ಲ. ಸಾವು ಪ್ರಕರಣವನ್ನು ಸ್ಥಳೀಯ ಶಾಸಕ( ಪ್ರದೀಪ್‌ ಈಶ್ವರ್‌ ಅಯ್ಯರ್)‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ( ಡಾ ಎಂ.ಸಿ.ಸುಧಾಕರ್)‌ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸಂಸದ ಡಾ ಕೆ.ಸುಧಾಕರ್‌ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರ ಈ ಹುನ್ನಾರವನ್ನು ಜನರು ನಂಬುವುದಿಲ್ಲ. ಅಗ್ನಿಪರೀಕ್ಷೆಯ ಪ್ರಕರಣದಿಂದ ಶೀಘ್ರ ಹೊರಗೆ ಬರುವುದಾಗಿ ಚಿಕ್ಕಬಳ್ಳಾಪುರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ವಿಶ್ವಾಸ ವ್ಯಕ್ತಪಡಿಸಿದರು.
ಆ.7 ರ ಬೆಳಗ್ಗೆ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಬರೆದಿದ್ದಾರೆ ಎನ್ನಲಾದ  ನಾಲ್ಕು ಪುಟಗಳ ಡೆತ್‌ನೋಟ್‌ ತನಿಖೆಯ ವೈಜ್ಞಾನಿಕ ಪರೀಕ್ಷೆಗೊಳಪಡಬೇಕಾಗಿದೆ. ಇನ್ನೂ ಮೂರು ದಿನಗಳ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಡೆತ್‌ನೋಟ್‌ ಪತ್ರ ವೈರಲ್‌ ಆದರೂ ಸ್ಥಳೀಯ ಅಧಿಕಾರಿಗಳು ಏಕೆ ಕ್ರಮ ವಹಿಸಿಲ್ಲ? ಒಂದು ವೇಳೆ ಎಚ್ಚೆತ್ತುಕೊಂಡಿದ್ದಲ್ಲಿ ಆ ಯುವಕನ ಜೀವ ಕಾಪಾಡಬಹುದಿತ್ತು ಎಂದರು.
ಡೆತ್‌ನೋಟ್‌ ಪ್ರಕಾರ ಸರ್ಕಾರಿ ಉದ್ಯೋಗ ಕೊಡಿಸಲು ಬಾಬುವಿನಿಂದ ಆರೋಪಿಗಳಾದ ನಾಗೇಶ್‌ ಹಾಗೂ ಮಂಜುನಾಥ್‌ ಹಣ ಪಡೆದಿದ್ದಾರೆ ಎಂದೇಳಲಾಗುತ್ತಿದೆ. ನಾನಂತೂ 
ಮೃತ ಚಾಲಕ ಬಾಬುರನ್ನು ಒಮ್ಮೆಯೂ ನೋಡಿಯೇ ಇಲ್ಲ.‌ ಆತ ಎಂದಿಗೂ ನನ್ನ ಬಳಿ ಬಂದು ಉದ್ಯೋಗ ಕೇಳಿಲ್ಲ. ಅನೇಕರಿಗೆ ಹೊರ ಗುತ್ತಿಗೆಯಾಧಾರಿತ ಕೆಲಸ ಕೊಡಿಸಲಾಗಿದೆ. ಆದರೆ, ಸರ್ಕಾರಿ ಹುದ್ದೆ ಕೊಡಿಸಲು ಆಗುವುದಿಲ್ಲ ಎಂದರು.