ಮಂಡ್ಯ: ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರು ದಾಖಲೆಯೊಂದಿಗೆ ಚರ್ಚೆಗೆ ಬರಲಿ ಅದಕ್ಕೆ ಉತ್ತರ ಕೊಡಲು ಸಿದ್ದರಿದ್ದೇವೆ. ಅಂತೆಯೇ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಈವರೆಗೆ ತಾಲೂಕಿಗೆ ತಂದಿರುವ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಹಿತ ಕೊಡುತ್ತೇವೆ ಎಂದು ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಹೇಳಿದರು. ಅನ್ನದಾನಿ ಅವರು ಸುದ್ದಿಗೋಷ್ಠಿ ನಡೆಸಿ ತಾಲೂಕಿನ ನಾಲ್ಕೈದು ರಸ್ತೆಗಳ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿ, ಇವು ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ದಿ ಕಂಡಿದ್ದವು ಎಂದು ತಿಳಿಸಿದ್ದಾರೆ. ಅದು ಸತ್ಯ. ಅವರ ಶಾಸಕತ್ವದ ಅವಧಿಯಲ್ಲಿ ಕೇವಲ ನಾಲ್ಕೈದು ರಸ್ತೆ ಮಾತ್ರ ಅಭಿವೃದ್ದಿಪಡಿಸಲಾಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ಶಾಶ್ವತ ಯೋಜನೆ ಜಾರಿಗೊಳಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಭೂಮಿ ಅಕ್ರಮ ಖಾತೆ ಪ್ರಕರಣ ಬಯಲು ಮಾಡಿದ್ದು ತಾನೇ ಎಂದು ಅನ್ನದಾನಿ ಹೇಳಿಕೊಂಡಿದ್ದಾರೆ. ಆದರೆ 2023 ಫೆ.19ರಂದು ನರೇಂದ್ರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ತನಿಖೆಗೆ ಆಗ್ರಹಿಸಿದ್ದರು. ಆ ವೇಳೆ ತಾವೇ ಶಾಸಕರಾಗಿದ್ದರು ಎನ್ನುವುದು ಅನ್ನದಾನಿ ಅವರಿಗೆ ನೆನಪಿನಲ್ಲಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು ಮಾತನಾಡಿ, ನರೇಂದ್ರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಅಭಿವೃದ್ದಿ ಪರ್ವದ ಬಗ್ಗೆ ಪಕ್ಷಾತೀತವಾಗಿ ಜನರು ಮೆಚ್ಚುಗೆ ಸೂಚಿಸುತ್ತಾರೆ. ಅಭಿವೃದ್ದಿ ಶೂನ್ಯವೆಂಬ ಮಾಜಿ ಶಾಸಕ ಆರೋಪ ಸತ್ಯಕ್ಕೆ ದೂರವಾಗಿದ್ದು, ಅವರು ಹಾಕಿರುವ ಸವಾಲಿನ ಆರ್ಥಿಕ ಇಲಾಖೆಯ ಮಂಜೂರಾತಿ ಆದೇಶದೊಂದಿಗೆ ಲಿಖಿತ ಉತ್ತರ ನೀಡಲು ಬದ್ಧರಾಗಿರುವುದಾಗಿ ಪ್ರತಿ ಸವಾಲು ಹಾಕಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮಾತನಾಡಿ, ಹತ್ತು ವರ್ಷ ಶಾಸಕರಾಗಿದ್ದ ಅನ್ನದಾನಿ ಅವರು ಸರ್ಕಾರದ ನಿಗಮ/ಮಂಡಳಿಗಳಲ್ಲಿ ಯಾವ ಜನಾಂಗದವರಿಗೆ ಸ್ಥಾನ ಮಾನ ಕಲ್ಪಿಸಿದ್ದಾರೆಂದು ಬಹಿರಂಗಪಡಿಸಬೇಕು. ಶಾಸಕ ನರೇಂದ್ರಸ್ವಾಮಿ ಅವರು ತಮಗೆ ಅಧಿಕಾರ ದೊರಕಲು ಶ್ರಮಿಸಿದ ಮುಖಂಡರಿಗೆ ಟಿಎಪಿಸಿಎಂಎಸ್, ಮನ್‌ಮುಲ್, ಡಿಸಿಸಿ ಬ್ಯಾಂಕ್, ಕೆಎಸ್‌ಆರ್‌ಟಿಸಿ ನಿಗಮ ಸೇರಿದಂತೆ ಹಲವು ಹುದ್ದೆಗಳನ್ನು ನೀಡಿ ತಮ್ಮ ಸಾಮರ್ಥ್ಯ ತೋರಿದ್ದಾರೆ ಎಂದು ತಿರುಗೇಟು ನೀಡಿದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪ್ರಭು ಮಾತನಾಡಿ, ಎಸ್ಸಿ ಮತ್ತು ಎಸ್ಟಿ ಜನಾಂಗಕ್ಕೆ ಬ್ಯಾಕ್‌ಲಾಗ್ ಹುದ್ದೆ ಕೊಡಿಸುವಲ್ಲಿ ನರೇಂದ್ರಸ್ವಾಮಿ ಕಾರ್ಯದಕ್ಷತೆ ಎಷ್ಟು ಎಂಬುದು ಆ ಜನಾಂಗದ ನೌಕರರು ಮತ್ತು ಅಧಿಕಾರಿಗಳಿಗೆ ತಿಳಿದಿದೆ. ಆದ್ದರಿಂದ ಮಾಜಿ ಶಾಸಕರ ಸಲಹೆ ಪಡೆದು ಆ ಜನಾಂಗಕ್ಕೆ ನ್ಯಾಯ ಕೊಡಿಸುವ ಅಗತ್ಯವಿಲ್ಲವೆಂದರು. ಮನ್‌ಮುಲ್ ನಿರ್ದೇಶಕ ಕೃಷ್ಣೇಗೌಡ ಮಾತನಾಡಿ, ಮಳವಳ್ಳಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ವಿವಿಧ ಇಲಾಖೆಗಳ ಅನುದಾನ ತರುವಲ್ಲಿ ನರೇಂದ್ರಸ್ವಾಮಿ ಯಶಸ್ವಿಯಾಗಿದ್ದಾರೆ. ಶಾಸಕರ ಕಾರ್ಯ ವೈಖರಿ ಬಗ್ಗೆ ಪ್ರಚಾರದ ಮಾತನಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ ಎಂದರು.
ಮಳವಳ್ಳಿ ತಾಲೂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಯಾವುದೇ ಶಾಶ್ವತ ಯೋಜನೆ ತರಲಾಗದ ಅನ್ನದಾನಿ ಅವರ ಬೆದರಿಕೆ ಮತ್ತು ದಬ್ಬಾಳಿಕೆಗೆ ಯಾರೂ ಹೆದರುವುದಿಲ್ಲ. ಹಸಿ ಸುಳ್ಳನ್ನೇ ಪದೇ ಪದೇ ಉಚ್ಚರಿಸುವ ಮಾಜಿ ಶಾಸಕರು ಕಳೆದ ಮನ್‌ಮುಲ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿಗೆ ತಾವೇ ತಂತ್ರಗಾರಿಕೆ ರೂಪಿಸಿದ್ದರೆಂದು ಆ ಪಕ್ಷದವರೇ ಮಾತನಾಡುತ್ತಿದ್ದಾರೆ. ಚಿಕ್ಕಲಿಂಗಯ್ಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ಮಳವಳ್ಳಿ ಪಟ್ಟಣದಲ್ಲಿ ಸುಸಜ್ಜಿತ ಸ್ತ್ರೀಶಕ್ತಿ ಭವನ, ಅಂಬೇಡ್ಕರ್ ಭವನ, ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರ, ಉದ್ಯಾನ ಅಭಿವೃದ್ಧಿ, ಸೆಸ್ಕ್ ವಿಭಾಗೀಯ ಕಚೇರಿ, ಎಪಿಎಂಸಿ ವಿಭಾಗ ನಿರ್ಮಾಣ, ಮೈಸೂರು ರಸ್ತೆ ಅಗಲೀಕರಣ, ಬಾಲ ಭವನ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಆದರೆ ಒಂದೂ ಜನಪರ ಯೋಜನೆ ತರದ ಮಾಜಿ ಶಾಸಕರು 24*7 ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳುವ ಮುನ್ನ ಪುರಸಭೆಗೆ ಹಸ್ತಾಂತರ ಮಾಡಿಸಿದ್ದು ತಪ್ಪಲ್ಲವೇ?. ದೊಡ್ಡಯ್ಯ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ