ಜಿಲ್ಲೆ

ಮತದಾರರ ಪಟ್ಟಿಗೆ 18 ಸಾವಿರ ಶಿಕ್ಷಕರ ನೋಂದಣಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ನೈರುತ್ಯ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಗೆ ಈಗಾಗಲೇ 18 ಸಾವಿರ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರು ನೋಂದಣಿಯಾಗಲಿದ್ದು, 20 ಸಾವಿರಕ್ಕೆ ಏರಿಯಾಗುವ ಸಂಭವವಿದೆ. ಈ ಬಾರಿ ಚುನಾವಣಾ ಆಯೋಗದ ನಿರ್ದೆಶನದಂತೆ ಜಿಲ್ಲಾಡಳಿತವೇ ಮತದಾರರನ್ನು ನೋಂದಾಯಿಸಿಕೊಳ್ಳುತ್ತಿರುವುದು ಶ್ಲಾನೀಯ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್​ ಅಭ್ಯರ್ಥಿ ಕೆ.ಕೆ. ಮಂಜುನಾಥ್​ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ, ಅನುದಾನಿತ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಮತದಾರರಾಗಲು ಆರ್ಹರಾಗಿದ್ದಾರೆ. ಬೇರೆ ಯಾವ ಸರ್ಕಾರಿ ನೌಕಕರಿಗೂ ಚುನಾವಣೆಗೆ ನಿಲ್ಲುವ ಅವಕಾಶವಿಲ್ಲ. ಶಿಕ್ಷಕರಿಗೆ ಮಾತ್ರ ಈ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉಡುಪಿ, ದ.ಕ., ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚೆನ್ನಗಿರಿ ಸೇರಿ 30 ವಿಧಾನಸಭಾ ಕ್ಷೇತ್ರಗಳು ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ ಎಂದು ಮಾಹಿತಿ ನೀಡಿದರು.

ಒಪಿಎಸ್​ ಜಾರಿಗೆ ಬದ್ಧ
2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಎನ್​ ಪಿ ಎಸ್​ ಜಾರಿಗೊಳಿಸಿತ್ತು. ಇದರಿಂದ ನಿವೃತ್ತಿಯ ಬಳಿಕ ಶಿಕ್ಷಕರಿಗೆ ಅಲ್ಪಮೊತ್ತದ ಪೆನ್ಶನ್​ ಲಭಿಸುತ್ತಿದ್ದು, ಕಾಂಗ್ರೆಸ್​ ಸರ್ಕಾರ ಒಪಿಎಸ್​ (ಹಳೆ ಪಿಂಚಣಿ ಪದ್ಧತಿ) ಜಾರಿಗೆ ಬದ್ಧವಾಗಿದೆ. ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಿದ್ದೇವೆ. ಅನುದಾನಿತ ಶಾಲಾ ಶಿಕ್ಷಕರಿಗೆ ಯಾವುದೇ ಪಿಂಚಣಿ ಲಭ್ಯವಾಗುತ್ತಿಲ್ಲ. ಭಡ್ತಿ ಹೊಂದಿದ ಶಿಕ್ಷಕರಿಗೆ ಸಂಬಳ ಹೆಚ್ಚಳವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ, ಮುಖಂಡರಾದ ಕುಶಲ ಶೆಟ್ಟಿ, ಭಾಸ್ಕರ ರಾವ್​ ಕಿದಿಯೂರು, ಬಿಪಿನ್​ ಚಂದ್ರಪಾಲ್​ ಮೊದಲಾದವರು ಉಪಸ್ಥಿತರಿದ್ದರು.