ಮೈಸೂರು: ಮತಗಳ್ಳತನ ಮಾಡಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಹಾಗೂ ನಗರ ಸಮಿತಿ ವತಿಯಿಂದ ಶನಿವಾರ ನಗರದ ಗಾಂಧಿವೃತ್ತದಲ್ಲಿ ‘ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ’ ನಡೆಯಿತು.
ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗುತ್ತಿದ್ದು, ಜನರಿಗೆ ಉತ್ತಮ ಆಡಳಿತ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ನೂರು ದಿನಗಳ ಅಡಳಿತ ದೊರೆತರೆ ದಿನನಿತ್ಯದ ವಸ್ತುಗಳ ಬೆಲೆ ಇಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರುವ ಮುನ್ನ ದೇಶದ ಜನರಿಗೆ ಭರವಸೆ ನೀಡಿದ್ದರು. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆಯೇ ವಿನಹ ಇಳಿಕೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದಿದ್ದರು. ಆದರೆ, ನಯಾಪೈಸೆ ಹಣ ಹಾಕಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ನೀಡಿದ ಭರವಸೆ ಹುಸಿಯಾಗಿದೆ ಎಂದು ಅಸಮಾಧಾನ ವ್ಕಕ್ತಪಡಿಸಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ತಮ್ಮ ಚೇಲಾಗಳನ್ನು ನೇಮಕ ಮಾಡಿಕೊಂಡಿದ್ದಾರೆ. ವಾಮಮಾರ್ಗದ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ನೈಜ ಮತದಾರರನ್ನು ಮತದಾರರ ಪಟ್ಟಿಗೆ ತೆಗೆಯುವ ಹಾಗೂ ನಕಲಿ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆದಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಕೋಮು ಸಂಘರ್ಷಗಳು ಹೆಚ್ಚಾಗುತ್ತಿವೆ. ಬಿಜೆಪಿ ಅಡಳಿತ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಬದಲು ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಬಿಜೆಪಿ ಮತಗಳ್ಳತನ ನಡೆಸುವ ಮೂಲಕ ಅಧಿಕಾರ ಪಡೆಯುತ್ತಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಕಾಂಗ್ರೆಸ್ ಮತದಾರರು ಇರುವ ಕಡೆಗಳಲ್ಲಿ ಮತದಾರರ ಹೆಸರು ಗಳನ್ನು ಡಿಲೀಟ್ ಮಾಡುವ ಹಾಗೂ ಬಿಜೆಪಿ ಗೆಲುವಿಗೆ ನಕಲಿ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆದಿದೆ. ಬಿಜೆಪಿ ನಾಯಕರು ಕೇಸರಿ ಬಾವುಟ, ಹಣೆಗೆ ನಾಮ ಹಾಕಿ ಜನರನ್ನು ಹುಚ್ಚೆಬ್ಬಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಬೇರೇನು ಮಾಡುತ್ತಿಲ್ಲ. ಬಿಜೆಪಿ ಈ ನಾಟಕಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಮಾತನಾಡಿ, ಆರ್‌ಎಸ್‌ಎಸ್, ಬಜರಂಗದಳ, ವಿಎಚ್‌ಪಿ ಸಂಘಟನೆಗಳು ಧರ್ಮ, ಜಾತಿ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ಹೆಚ್ಚು ಬೀಳುವಂತೆ ಮತ್ತು ಕಾಂಗ್ರೆಸ್ ಪರವಾಗಿ ಮತ ಬೀಳುವುದನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ಇದನ್ನು ಸಮಗ್ರವಾಗಿ ಅಧ್ಯಯನ ನಡೆಸಿ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಬಿಹಾರ ರಾಜ್ಯದಲ್ಲೂ ಮತಗಳ್ಳತನ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ, ರಾಹುಲ್ ಗಾಂಧಿ ಹೋರಾಟದಿಂದ ಅದಕ್ಕೆ ತಡೆಯಾಗಿದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಎಂ.ಶಿವಪ್ರಸಾದ್, ಆರ್.ಮೂರ್ತಿ, ಈಶ್ವರ ಡಿ.ಚಕ್ಕಡಿ, ಎಂ.ಶಿವಣ್ಣ, ಭಾಸ್ಕರ್ ಎಲ್.ಗೌಡ, ಬಿ.ಎಂ.ರಾಮು, ಲತಾ ಸಿದ್ದಶೆಟ್ಟಿ, ಟಿ.ಬಿ ಚಿಕ್ಕಣ್ಣ, ಪುಷ್ಪಲತಾ, ಮೋದಾಮಣಿ, ಪುಷ್ಪಲತಾ ಜಗನ್ನಾಥ್, ಸುಶೀಲ ಕೇಶವಮೂರ್ತಿ, ಎಂ.ಪ್ರದೀಪ್ ಕುಮಾರ್, ಕೆ.ವಿ. ಮಲ್ಲೇಶ್, ಎಚ್.ಎ.ವೆಂಕಟೇಶ್, ಎಚ್.ವಿ. ರಾಜೀವ್, ಸುಧಾ ಮಹದೇವ್ ಹಾಗೂ ಇತರರು ಪಾಲ್ಗೊಂಡಿದ್ದರು.