ಜಿಲ್ಲೆ

ಸನಾತನ ಧರ್ಮವನ್ನು ಸಮಾಪ್ತಿಗೊಳಿಸಲು ಕಾಂಗ್ರೆಸ್ ಯತ್ನ : ನರೇಂದ್ರ ಮೋದಿ

ಮೈಸೂರು: ಸನಾತನ ಧರ್ಮವನ್ನು ಸಮಾಪ್ತಿಗೊಳಿಸಲು, ಹಿಂದು ಶಕ್ತಿಯನ್ನು ನಾಶ ಪಡಿಸಲು ‘ಐಎನ್‌ಡಿಐಎ’ ಮೈತ್ರಿಕೂಟ ನಿರಂತರ ಪ್ರಯತ್ನ ನಡೆಸುತ್ತಿದ್ದು, ನರೇಂದ್ರ ಮೋದಿ ಇರುವವರೆಗೆ ಅವರ ಕನಸುಗಳನ್ನು ಸಾಕಾರಗೊಳಿಸಲು ಬಿಡುವುದಿಲ್ಲ. ಇದು ಮೋದಿ ದೇಶದ ಜನತೆಗೆ ನೀಡುತ್ತಿರುವ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಎನ್‌ಡಿಎ ಮೈತ್ರಿಕೂಟ ಹಮ್ಮಿಕೊಂಡಿದ್ದ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಾಷಣದ ಉದ್ದಕ್ಕೂ ಕಾಂಗ್ರೆಸ್ ಗ್ಯಾರಂಟಿಗೆ ತಿರುಗೇಟು ನೀಡುವ ಜತೆಗೆ ಕಾಂಗ್ರೆಸ್ ಹಾಗೂ ‘ಐಎನ್‌ಡಿಐಎ’ ಮೈತ್ರಿಕೂಟದ ರಾಜಕೀಯ ನಿಲುವು ಹಿಂದುಗಳಿಗೆ ಎಷ್ಟು ಅಪಾಯಕಾರಿ ಎಂಬ ಅಂಶವನ್ನು ತೆರೆದಿಡುವ ಪ್ರಯತ್ನ ಮಾಡಿದರು.

ಹಿಂದುಗಳ ಶ್ರದ್ಧಾಕೇಂದ್ರವಾದ ರಾಮಜನ್ಮಭೂಮಿಯಲ್ಲಿ ಶ್ರೀರಾಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ‘ಐಎನ್‌ಡಿಐಎ’ ಮೈತ್ರಿಕೂಟ ಭಾಗವಹಿಸದೆ ಇರುವ ನಿಲುವನ್ನು ತೆಗೆದುಕೊಂಡಿತು. ಹಿಂದುಗಳ ಶದ್ಧೆ ಹಾಗೂ ನಂಬಿಕೆಯನ್ನು ಅಪಮಾನ ಮಾಡುವ ಕಾರ್ಯವನ್ನು ಕಾಂಗ್ರೆಸ್ ಹಾಗೂ ‘ಐಎನ್‌ಡಿಐಎ’ ಮೈತ್ರಿಕೂಟ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಹಿಂದುಗಳ ನಂಬಿಕೆಯನ್ನು ಗೌರವಿಸಿದ ಕಾಂಗ್ರೆಸ್ ಮತ್ತೊಂದೆಡೆ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಜಿಟಲ್ ಇಂಡಿಯಾದಿಂದ ದೇಶದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಈ ಬಾರಿಯ ಲೋಕಸಭಾ ಚುನಾವಣೆಗೆ ನಾವು ಬಿಡುಡೆ ಮಾಡಿರುವ ಪ್ರಣಾಳಿಕೆಯು ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. 10 ವರ್ಷಗಳ ಹಿಂದೆ ಭಾರತ ತಂತ್ರಜ್ಞಾನಕ್ಕಾಗಿ ಬೇರೆ ದೇಶವನ್ನು ನೋಡುವ ಪರಿಸ್ಥಿತಿ ಇತ್ತು. ಆದರೆ, ಪ್ರಸ್ತುತ ನಾವು ಚಂದ್ರಯಾನವನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ನಮ್ಮದೇ ಆದ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದ್ದೇವೆ, ಸೆಮಿ ಕಂಡಕ್ಟರ್‌ಗಳನ್ನು ನಿರ್ಮಾಣ ಮಾಡಿದ್ದೇವೆ. ಪ್ರಸ್ತುತ ಭಾರತ ‘ಇನ್ನೋವೇಷನ್ ಹಬ್’ ಆಗಿ ಮಾರ್ಪಾಡು ಹೊಂದಿದೆ. ಕಡಿಮೆ ದರದಲ್ಲಿ ನಾವು ವಿಶ್ವಕ್ಕೆ ಔಷಧವನ್ನು ಪೂರೈಸುತ್ತಿದ್ದೇವೆ, ಕಡಿಮೆ ದರದ ತಂತ್ರಜ್ಞಾನ ಹಾಗೂ ವಾಹನಗಳನ್ನು ಅಭಿವೃದ್ಧಿ ಪಡಿಸಿದ್ದೇವೆ. ದೇಶವನ್ನು ನಾವು ಆರ್‌ಎಂಡಿ ಹಬ್ ಆಗಿ ಪರಿವರ್ತನೆ ಮಾಡುತ್ತಿದ್ದೇವೆ ಎಂದು ಹೇಳಿದರು.