ಜಿಲ್ಲೆ

ಭಾರತ್ ಜೋಡೋ ಬದಲು ಭಾರತವನ್ನು ಇಬ್ಭಾಗ ಮಾಡಲು ಕಾಂಗ್ರೆಸ್ ಯತ್ನ : ಮಾಜಿ ಸಚಿವ ಎಸ್.ಎ. ರಾಮದಾಸ್

ಮೈಸೂರು: ಒಂದೆಡೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತ್ ಜೋಡೋ ಅನ್ನುತ್ತಿದ್ದಾರೆ. ಮತ್ತೊಂದೆಡೆ ಅವರದೇ ಪಕ್ಷದ ಸಂಸದ ಡಿ.ಕೆ. ಸುರೇಶ್ ಭಾರತವನ್ನು ಇಬ್ಭಾಗ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಅಸಮಾಧಾನ ವ್ಯಕ್ತಪಡಿಸಿದರು.

ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಅನಿವಾರ್ಯತೆ ಇದೆ ಎಂದು ಹೇಳಿಕೆ ನೀಡಿರುವ ಡಿ.ಕೆ. ಸುರೇಶ್ ಕೂಡಲೇ ಕ್ಷಮೆಯಾಚಿಸಬೇಕು. ಎಐಸಿಸಿ, ಕೆಪಿಸಿಸಿ ದುರ್ಬಲವಾಗಿದೆ ಎಂಬುದಕ್ಕೆ ಡಿ.ಕೆ. ಸುರೇಶ್ ಹೇಳಿಕೆಯೇ ಸಾಕ್ಷಿ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮೈಸೂರು ಸೇರಿದಂತೆ ನಾಲ್ಕು ಲೋಕಿಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷ ನನಗೆ ವಹಿಸಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳಿಗೆ ನನ್ನನ್ನು ಕ್ಲಸ್ಟರ್ ಮಾಡಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಮಾತ್ರ ನನ್ನದು. ಟಿಕೆಟ್ ಹಂಚಿಕೆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ನಮ್ಮಿಂದ ಪಕ್ಷದ ಹೈಕಮಾಂಡ್ ಯಾವುದೇ ಮಾಹಿತಿ ಕೇಳಿಲ್ಲ. ಆದರೆ, ಗೆಲ್ಲುವ ಮಾನದಂಡ ಆಧರಿಸಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಾನು ಎಂದೂ ಹೋಗಿಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ಧನಾಗಿರುತ್ತೇನೆ. ಯಾರಿಗೆ ಟಿಕೆಟ್ ದೊರೆತರೂ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಗೆಲ್ಲಿಸುತ್ತೇವೆ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಹೇಳಿದರು.

ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಚುನಾವಣೆಗೆ ಪೂರಕವಾಗಿ ಬಜೆಟ್ ಮಂಡಿಸುತ್ತಾರೆ ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ ಯಾವುದೇ ಚುನಾವಣೆ ಭರವಸೆ ನೀಡದೆ 140 ಕೋಟಿ ರೂ. ಭಾರತೀಯರಿಗೆ ಉತ್ತಮ ಬಜೆಟ್ ನೀಡಿದೆ. ಬಡವರು, ಮಹಿಳೆಯರು, ಯುವಕರು ಹಾಗು ರೈತರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ. ಯಾವುದೇ ತೆರಿಗೆಗಳನ್ನು ಹೆಚ್ಚು ಮಾಡದೆ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ ಎಂದರು.