ಹುಬ್ಬಳ್ಳಿ : ರಾಮರಾಜ್ಯದ ಪರಿಕಲ್ಪನೆ ಮೊದಲು ತಂದವರೇ ಕಾಂಗ್ರೆಸ್ನವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೂ ರಾಮನನ್ನು ನಂಬುತ್ತೇವೆ. ರಾಮರಾಜ್ಯದ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟುಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಯುವಕರು, ಅನುಭವಸ್ಥರು ಸೇರಿ ಸಾಮಾಜಿಕ ನ್ಯಾಯದ ಆಧಾರದಡಿ ಲೋಕಸಭೆ ಟಿಕೆಟ್ ನೀಡಲಾಗುತ್ತದೆ. ರಜತ್ ಉಳ್ಳಾಗಡ್ಡಿಮಠ ನನ್ನ ಅಳಿಯ ಎಂಬ ಕಾರಣಕ್ಕೆ ಟಿಕೆಟ್ ನೀಡಲಾಗುವುದಿಲ್ಲ. ಯಾರಿಗೆ ಟಿಕೆಟ್ ನೀಡಬೇಕು ಅಥವಾ ಬೇಡ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಜ್ಞಾನದೇಗುಲವಿದು, ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷ ವಾಕ್ಯವನ್ನು ‘ಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿರುವಲ್ಲಿ ಯಾವುದೇ ತಪ್ಪಿಲ್ಲ. ಜ್ಞಾನದೇಗುಲದಿಂದ ಜ್ಞಾನ ಬರುತ್ತದೆ. ಜ್ಞಾನದಿಂದ ಆತ್ಮವಿಶ್ವಾಸ ಮತ್ತು ಧೈರ್ಯ ಬರುತ್ತದೆ ಎಂದು ಹೇಳಿದರು.