ರಾಯಚೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಜರುಗಿದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್ ಅಗರವಾಲ್ ಸಮ್ಮುಖದಲ್ಲಿ ಪಕ್ಷದ ಎಲ್ಲ ಮುಖಂಡರು ಕೈಜೋಡಿ ಒಗ್ಗಟ್ಟು ಪ್ರದರ್ಶಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಕೆ.ಶಿವನಗೌಡ ನಾಯಕ, ರಾಜುಗೌಡ, ಗಂಗಾಧರ ನಾಯಕ, ತಿಪ್ಪರಾಜು ಹವಾಲ್ದಾರ್, ಬಸನಗೌಡ ಬ್ಯಾಗವಾಟ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಇದ್ದರು. 
ಜಿಲ್ಲೆ

ದೇಶದಲ್ಲಿ ಕಾಂಗ್ರೆಸ್ ವಿನಾಶದ ಅಂಚಿನಲ್ಲಿದೆ

ರಾಯಚೂರು: ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವಿನಾಶದ ಅಂಚಿಗೆ ಬಂದು ತಲುಪಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನದಾಸ್ ಅಗರವಾಲ್ ಹೇಳಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ರಾಯಚೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳು ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದ ನಂತರದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗುತ್ತದೆ. ಹನುಮಾನ ಚಾಲಿಸ್ ಪಠಣ ಮಾಡಿದವರ ಮೇಲೆ ಹಲ್ಲೆ ನಡೆಸಲಾಗುತ್ತದೆ ಎಂದು ಯಾರೂ ಯೋಚಿಸಲಿರಲಿಲ್ಲ. ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದವರು ಪಶ್ಚಿಮ ಬಂಗಾಳದಲ್ಲಿ ಅಡಗಿಕೊಳ್ಳುತ್ತಾರೆ. ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ಉಗ್ರಗಾಮಿಗಳಿಗೆ ಆಶ್ರಯ ನೀಡಲಾಗುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ತೊಲಗಬೇಕು ಎಂದರೆ ಮೋದಿ ನಾಯಕತ್ವ ಬೇಕು ಎಂದು ಜಗತ್ತಿನ ಎಲ್ಲ ರಾಷ್ಟ್ರಗಳು ಬಯಸುತ್ತಿವೆ ಎಂದರು.
ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ಪಕ್ಷದಲ್ಲಿ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ಟಿಕೆಟ್ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಪಕ್ಷದ ಯಾರಿಗೆ ಟಿಕೆಟ್ ನೀಡಿದೆ ಅವರನ್ನು ಗೆಲ್ಲಿಸಲು ಎಲ್ಲರೂ ಕೂಡಿ ಕೆಲಸ ಮಾಡುತ್ತೇವೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತು ಕೊನೆ ಚುನಾವಣೆ ಎದುರಿಸುತ್ತಿರುವ ಅಮರೇಶ್ವರ ನಾಯಕರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.
ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ಪಕ್ಷದಲ್ಲಿ ಶಿಸ್ತು ಕಾಪಾಡಿಕೊಂಡು ಬರುವುದು ಮುಖಂಡರ ಜವಾಬ್ದಾರಿಯಾಗಿದೆ. ಪಕ್ಷದ ಚೌಕಟ್ಟಿನಲ್ಲಿಯೇ ಹೋರಾಟ ಮಾಡಬೇಕು. ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಸ್ಥಾನಮಾನ ಅಗತ್ಯ ಎನ್ನುವ ಬಯಕೆ ಸಹಜ. ಆದರೆ ಅದು ಭಿಕ್ಷೆಯಾಗಿರಬಾರದು. ಗೌರವದಿಂದ ಪಡೆಯಬೇಕು. ಎಲ್ಲರೂ ಕೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಉಸ್ತುವಾರಿ ದೊಡ್ಡನಗೌಡ ಪಾಟೀಲ್, ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ರಾಜುಗೌಡ, ಗಂಗಾಧರ ನಾಯಕ, ಬಸನಗೌಡ ಬ್ಯಾಗವಾಟ, ತಿಪ್ಪರಾಜು ಹವಾಲ್ದಾರ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಅಮೀನರೆಡ್ಡಿ ಪಾಟೀಲ್, ಶಶಿಕಲಾ ಟೆಂಗಳಿ, ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಹಾಗೂ ಕ್ಷೇತ್ರ ಎಲ್ಲ ಮಂಡಲ ಅಧ್ಯಕ್ಷರು ಉಪಸ್ಥಿತರಿದ್ದರು.