ಜಿಲ್ಲೆ

ಸಂವಿಧಾನಕ್ಕಲ್ಲ ಕಾಂಗ್ರೆಸ್‌ಗೆ ಆಪತ್ತು ಬಂದಿದೆ: ಸಂಸದ ವಿ.ಶ್ರೀನಿವಾಸಪ್ರಸಾದ್ ಚಾಟಿ

ಮೈಸೂರು: ಸಂವಿಧಾನಕ್ಕೆ ಆಪತ್ತು ಇಲ್ಲ, ಕಾಂಗ್ರೆಸ್‌ಗೆ ಆಪತ್ತು ಬಂದಿದೆ. ಅದಕ್ಕಾಗಿ ಸಂವಿಧಾನವನ್ನು ಗುರಾಣಿ ರೀತಿ ಬಳಕೆ ಮಾಡಿಕೊಳ್ಳುತ್ತಿದೆ. ಇದೆಲ್ಲ ಮತಕ್ಕಾಗಿ ಮಾಡುವ ಗಿಮಿಕ್ ಅಷ್ಟೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಕುಟುಕಿದರು.


ರಾಜ್ಯದಲ್ಲಿ ನಡೆದದ್ದು ಸಂವಿಧಾನ ಜಾಗೃತಿ ಜಾಥಾವಲ್ಲ, ಕಾಂಗ್ರೆಸ್‌ನ ಜಾಗೃತಿ ಜಾಥಾ. ಸಿಎಂ, ಸಚಿವರ ಭಾವಚಿತ್ರ, ಗ್ಯಾರಂಟಿ ಯೋಜನೆಗಳ ಚಿತ್ರ ಅಂಟಿಸಿಕೊಂಡು ಏನು ಜಾಗೃತಿ ಮಾಡುತ್ತಾರೆ? ಸಂವಿಧಾನವನ್ನು ಯಾರಿಂದಲೂ ಬದಲು ಮಾಡಲು ಆಗಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಖರ್ಗೆ ಎಲ್ಲಿ ಹೋಗಿದ್ದರು?: ‘ಸಂವಿಧಾನ ಬದಲಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ದೇಶ ಸರ್ವಾಧಿಕಾರದತ್ತ ವಾಲಲಿದೆ’ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದಾಗ ಎಲ್ಲಿ ಹೋಗಿದ್ದರು. ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತಿರಲಿಲ್ಲವೇ? ಇದಕ್ಕೆ ಉತ್ತರ ಕೊಡಲಿ. ಅವಕಾಶ ಸಿಕ್ಕಾಗ ಇವರೇನು ಮಾಡಿದರು ಎಂಬುದು ಗೊತ್ತಿದೆ ಎಂದು ಹರಿಹಾಯ್ದರು.


‘ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡಲ್ಲ. ಬಡವರಿಗಾಗಿ ಮಾಡಲಿ. ಆದರೆ, 10 ತಿಂಗಳಲ್ಲಿ ಬಡವರನ್ನು ಬಡತನದಿಂದ ಮೇಲೆಕ್ಕೆತ್ತಲಾಗಿದೆ’ ಎಂಬ ಸಿದ್ದರಾಮಯ್ಯ ಹೇಳಿದ್ದಾರೆ. ಇವರಲ್ಲಿ ಏನಾದರೂ ಮಂತ್ರದಂಡ ಇದೆಯೇ ಎಂದು ಪ್ರಶ್ನಿಸಿದರು.


ಎಲೆಕ್ಷನ್‌ನ ಸ್ಟಂಟ್: ‘ಸರ್ವಾಧಿಕಾರಿ ನರೇಂದ್ರ ಮೋದಿ’ ಎಂದು ಎಲ್ಲೆಡೆ ಕೂಗಿ ಹೇಳಲಾಗುತ್ತಿದೆ. ಇದು ಎಲೆಕ್ಷನ್‌ನ ಸ್ಟಂಟ್ ಅಷ್ಟೆ. ರಾಹುಲ್‌ಗಾಂಧಿ ಪ್ರಧಾನಿ ಆಗುತ್ತಾರೋ, ಇಲ್ಲವೋ ಎಂದು ಹೇಳಲು ನಾನು ಜ್ಯೋತಿಷಿ ಅಲ್ಲ. ಇದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಈ ಸಲವೂ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ‘ಇಂಡಿಯಾ’ ಮೈತ್ರಿಕೂಟದ ನಾಯಕರೇ ಹೇಳುತ್ತಿದ್ದಾರೆ ಎಂದು ಹೇಳಿದರು.


ಈಗಿನ ಕಾಂಗ್ರೆಸ್ ದುಸ್ಥಿತಿ ಊಹಿಸಿರಲಿಲ್ಲ:


ನಾನು 25 ವರ್ಷ ಕಾಲ ಕಾಂಗ್ರೆಸ್‌ನಲ್ಲಿದ್ದವನು. ಮುಂದೊಂದು ದಿನ ಕಾಂಗ್ರೆಸ್‌ಗೆ ಇಂತಹ ದುಸ್ಥಿತಿ ಬರುತ್ತದೆ ಎಂದು ಊಹೆ ಕೂಡ ಮಾಡಿರಲಿಲ್ಲ. ನಾಯಕರಿಗೆ ಅವಕಾಶ ಕೊಡಲಿಲ್ಲ. ರಾಷ್ಟ್ರಮಟ್ಟದಲ್ಲೂ ಬೆಳೆಸಲಿಲ್ಲ. ಇದು ಪಕ್ಷದ ಮೇಲೆ ಪರಿಣಾಮ ಬೀರಿತು. ಇದಕ್ಕೆ ಪರ್ಯಾಯವಾಗಿ ಬಿಜೆಪಿ ಬೆಳೆಯಿತು ಎಂದು ವಿಶ್ಲೇಷಿಸಿದರು.


ಅಳಿಯಂದಿರಿಗೆ ಟಿಕೆಟ್ ನೀಡದಿದ್ದರೆ ಬೇಸರವಾಗಲ್ಲ


ನನ್ನ ಇಬ್ಬರು ಅಳಿಯಂದಿರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಷ್ಟೆ. ಏಕಾಏಕಿ ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಅದು ಅಷ್ಟು ಸುಲಭವೂ ಅಲ್ಲ. ಅಳಿಯ ಎಂಬ ಕಾರಣಕ್ಕೆ ಟಿಕೆಟ್ ಕೊಡಲಾಗಲ್ಲ. ಅವರಿಗೆ ಟಿಕೆಟ್ ಕೊಡಿ ಎಂದು ನಾನು ಹೇಳುವುದು ತಪ್ಪಾಗಲಿದೆ. ಟಿಕೆಟ್ ನೀಡದಿದ್ದರೆ ಖಂಡಿತ ಬೇಸರವಾಗಲ್ಲ. ಹೈಕಮಾಂಡ್ ತೀರ್ಮಾನವನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂದರು.
ಜನರು ಸಹ ಅಷ್ಟೇ ಕೆಟ್ಟು ಹೋಗಿದ್ದಾರೆ:

ಚುನಾವಣೆಯಲ್ಲಿ ದುಡ್ಡಿನ ಹಾಹಾಕಾರ ಸೃಷ್ಟಿಯಾಗುತ್ತಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಸಿಕ್ಕ ಸಿಕ್ಕವರು ರಾಜಕೀಯಕ್ಕೆ ಬರುತ್ತಿದ್ದಾರೆ. ರಿಯಲ್ ಎಸ್ಟೇಟ್, ಬಿಲ್ಡರ್‌ಗಳಂತಹ ಹಣವಂತರು ರಾಜಕೀಯದ ಮುನ್ನೆಲೆಗೆ ಬರುತ್ತಿದ್ದಾರೆ. ಇವರಿಗೆ ಬದ್ಧತೆ ಇಲ್ಲ. ರಾಜಕೀಯ ಎಂದರೆ ದುಡ್ಡು ಹಾಕಿ ದುಡ್ಡು ತೆಗೆಯುವ ದಂಧೆಯಂತಾಗಿದೆ. ಜನರು ಸಹ ಅಷ್ಟೇ ಕೆಟ್ಟುಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತೊಂದರೆ ಕೊಟ್ಟವರ ಬಗ್ಗೆಯೂ ಪುಸ್ತಕದಲ್ಲಿ ಬರೆದಿದ್ದೇನೆ


ನನ್ನ ಚುನಾವಣಾ ರಾಜಕೀಯಕ್ಕೆ 50 ವರ್ಷ. ಈ ಹಿನ್ನೆಲೆಯಲ್ಲಿ ನನ್ನ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮಾ.17ರಂದು ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದೆ. ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಡಾ.ಎಂ.ವೀರಪ್ಪ ಮೊಯ್ಲಿ, ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಕಾಗೋಡು ತಿಮ್ಮಪ್ಪ, ಪಿಜಿಆರ್ ಸಿಂಧ್ಯಾ ಭಾಗವಹಿಸಲಿದ್ದಾರೆ ಎಂದು ಪ್ರಸಾದ್ ತಿಳಿಸಿದರು.
ನನ್ನ ರಾಜಕೀಯ ಜೀವನದ ಕುರಿತು ನಾನೇ ಪುಸ್ತಕ ಬರೆದಿದ್ದು, ಯಾರು ನನಗೆ ತೊಂದರೆ ಕೊಟ್ಟರೋ ಅವರ ಕುರಿತೂ ಬರೆದಿದ್ದೇನೆ. ಸಂಸದರ ಅವಧಿ ಮುಗಿದ ಬಳಿಕ ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದರು.