ಕೆ.ಆರ್. ನಗರ: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಕಂಕಣಬದ್ಧವಾಗಿ ಕೆಲಸ ಮಾಡುತ್ತಿದ್ದು, ಆ ಮೂಲಕ ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಹೆಬ್ಬಾಳು ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಸರ್ಕಾರ ವಾರ್ಷಿಕ 52 ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಒಂದು ವರ್ಷಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 250 ಕೋಟಿ ರೂ. ನೀಡುತ್ತಿದ್ದು, ಇದರೊಂದಿಗೆ ಇತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಮಾಡುತ್ತಿದೆ. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇದೆ ಎಂದು ಹೇಳುತ್ತಿರುವ ವಿರೋಧ ಪಕ್ಷಗಳ ಆರೋಪ ಶುದ್ಧ ಸುಳ್ಳು ಎಂದು ತಿಳಿಸಿದರು.
ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರಿಗೆ ಕಳೆದ ಎರಡು ವರ್ಷಗಳಿಂದ ಹೊಸದಾಗಿ ಸಾಲ ನೀಡಲು ಸಾಧ್ಯವಾಗದಿರುವುದಕ್ಕೆ ನಬಾರ್ಡ್ ಬ್ಯಾಂಕ್ ಅನುಧಾನ ನೀಡದಿರುವುದೇ ಕಾರಣ. ಮುಂದಿನ ದಿನಗಳಲ್ಲಿ ಎಂಸಿಡಿಸಿಸಿ ಬ್ಯಾಂಕ್‌ಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ ನಿರ್ದೇಶಕರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಹಕಾರ ಸಚಿವರನ್ನು ಭೇಟಿ ಮಾಡಿ ಹೊಸ ಸದಸ್ಯರಿಗೆ ಸಾಲ ನೀಡಲು ಹಣ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ಹೇಳಿದರು.
ಪ್ರತಿಯೊಬ್ಬ ರೈತರು ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಾಗುವ ಮೂಲಕ ಬಡ್ಡಿರಹಿತ ಸಾಲ ಪಡೆದು ಇದರೊಂದಿಗೆ ಸಂಘಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ವ್ಯಾಪ್ತಿಗೆ ಸೇರಿದ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಎರಡು ತಾಲೂಕುಗಳ ವ್ಯಾಪ್ತಿಗೆ ಸೇರಿದ ಸಹಕಾರಿ ಸಂಘಗಳಿಗೆ ಭೇಟಿ ನೀಡಿ ಪೂರ್ಣ ಮಾಹಿತಿ ಪಡೆದು ಅಗತ್ಯವಾಗಿ ಆಗಬೇಕಿರುವ ಕಾರ್ಯಗಳ ಬಗ್ಗೆ ಪಟ್ಟಿಮಾಡಿ ಬ್ಯಾಂಕ್ ವತಿಯಿಂದ ದೊರೆಯುವ ಎಲ್ಲ ಅನುಕೂಲಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯಿಂದ ದೊಡ್ಡಸ್ವಾಮೇಗೌಡರಿಗೆ ಮನವಿ ಸಲ್ಲಿಸಿ ಸಂಘದ ಶಿಥಿಲ ಕಟ್ಟಡದ ದುರಸ್ತಿಗೆ 10 ಲಕ್ಷ ರೂ. ಅನುದಾನ ನೀಡಬೇಕೆಂದು ಕೋರಲಾಯಿತು.
ಸಂಘದ ಅಧ್ಯಕ್ಷ ಎಚ್.ಎಚ್. ನಾಗೇಂದ್ರ, ಉಪಾಧ್ಯಕ್ಷ ಸಿ.ಎಂ.ನಾಗೇಶ್, ನಿರ್ದೇಶಕರಾದ ಸಿ.ಆರ್.ಶಿವಪ್ರಕಾಶ್, ರಾಮಚಂದ್ರ ನಾಯಕ, ಎಚ್.ಕೆ.ಧನಂಜಯ, ಎನ್.ಪಿ.ಪ್ರಸನ್ನ, ಎಚ್.ಕೆ.ಮಂಜುನಾಥ್, ರವಿ, ಎಚ್.ಎಸ್.ರವಿಕುಮಾರ್, ಟಿ.ಉಮೇಶ್, ಸಿಇಒ ಡಿ.ಎಸ್.ಚಂದ್ರಶೇಖರ್, ಸಹಕಾರ್ಯದರ್ಶಿ ಎಂ.ಪಿ.ಉದಯಕುಮಾರ್, ಗ್ರಾಪಂ ಉಪಾಧ್ಯಕ್ಷ ಎಚ್.ಕೆ.ನಾಗೇಶ್, ಸದಸ್ಯ ಎಚ್.ಕೆ.ವೆಂಕಟರಾಮು, ಮಾಜಿ ಸದಸ್ಯ ಎಚ್.ಎಂ.ಮಂಜು, ತಾಪಂ ಮಾಜಿ ಅಧ್ಯಕ್ಷ ನಾಗರಾಜು, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಪ್ರಶಾಂತ್, ಗ್ರಾಮದ ಮುಖಂಡರಾದ ಮೋಟೇಗೌಡ, ಸಚಿನ್, ರಾಜೇಗೌಡ, ಮೋಹನಕುಮಾರ್, ಹಾಲನಾಯಕ, ಚಂದ್ರೇಗೌಡ, ಸೋಮಣ್ಣ, ಕಾಳಪ್ಪಚಾರ್, ಯು.ಕೃಷ್ಣೇಗೌಡ, ಸತೀಶ್, ರಾಜನಾಯಕ, ಗೋವಿಂದೆಗೌಡ ಸೇರಿದಂತೆ ಮತ್ತಿರರು ಇದ್ದರು.