ಹುನಗುಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಕಡಲೆ-ತೊಗರಿ ಬೆಂಬಲಬೆಲೆ ಖರೀದಿ ಕೇಂದ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು. ಆರ್.ಎಂ. ದಂಡಿನ, ಮಹಾಲಿಂಗಯ್ಯ ಹಿರೇಮಠ, ಜೈನಸಾಬ ಹಗೇದಾಳ, ಮಾಹಾಂತಮ್ಮ ಹೊಸೂರ ಇದ್ದರು. 
ಜಿಲ್ಲೆ

ರೈತರ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ

ಹುನಗುಂದ: ಪ್ರಸಕ್ತ ಸಾಲಿನ ಬೆಂಬಲಬೆಲೆ ಯೋಜನೆಯಡಿ ತೊಗರಿ ಮತ್ತು ಕಡಲೆ ಬೆಂಬಲಬೆಲೆ ಕೇಂದ್ರ ಆರಂಭಿಸಲಾಗಿದ್ದು, ತಾಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಡಲೆ-ತೊಗರಿ ಬೆಂಬಲಬೆಲೆ ಖರೀದಿ ಕೇಂದ್ರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ವಿವಿಧ ರೈತ ಸಂಘಟನೆಗಳು ಒತ್ತಾಯ ಮಾಡಿದರಿಂದ ಬೆಂಬಲಬೆಲೆ ಕೇಂದ್ರ ಆರಂಭಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಬೆಂಬಲ ಬೆಲೆ ಘೋಷಿಸಿ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದರು.

ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ದಂಡಿನ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಹುನಗುಂದ ಮತ್ತು ಇಳಕಲ್ಲ ತಾಲೂಕಿನಲ್ಲಿ 10 ತೊಗರಿ ಮತ್ತು ಕಡಲೆ ಬೆಂಬಲಬೆಲೆ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೆಂಬಲಬೆಲೆ ಯೋಜನೆಯಡಿ ತೊಗರಿಯನ್ನು ಪ್ರತಿ ಕ್ವಿಂಟಾಲ್ 7550 ರೂ. ಹಾಗೂ 450 ರೂ. ಸರ್ಕಾರದ ಪ್ರೋತ್ಸಹಧನ ನೀಡಿ, ಪ್ರತಿ ಎಕರೆಗೆ 4 ಕ್ವಿಂಟಾಲ್ ಖರೀದಿಸಲಾಗುವುದು. ಕಡಲೆಯನ್ನು ಪ್ರತಿ ಕ್ವಿಂಟಾಲ್‌ಗೆ 5650 ರೂ. ನಿಗದಿಪಡಿಸಿದ್ದು, ನೋಂದಣಿ ಮತ್ತು ಮಾರಾಟಕ್ಕೆ 90 ದಿನ ನಿಗದಿಪಡಿಸಲಾಗಿದೆ ಎಂದರು.

ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ ಮಾತನಾಡಿದರು.

ಮಾಹಾಂತಮ್ಮ ಹೊಸೂರ, ಗಿರಿಜಾ ಹೊಸೂರ, ಜೈನಸಾಬ ಹಗೇದಾಳ, ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಜೋಷಿ, ಬಸವರಾಜ ಹೊಸೂರ, ಕೃಷ್ಣಾ ಜಾಲಿಹಾಳ, ವಿಜಯಮಹಾಂತೇಶ ಮಲಗಿಹಾಳ, ನಾಗಪ್ಪ ಬೀಳಗಿ, ಪ್ರಭು ಇದ್ದಲಗಿ, ಮುತ್ತಣ್ಣ ಕುದರಿಮನಿ ಮತ್ತಿತರರಿದ್ದರು.