ಹುಬ್ಬಳ್ಳಿ : ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂಬುದು ಕಾಂಗ್ರೆಸ್ ಗೆ ಈಗ ಅರಿವಿಗೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸುಳಿವು ನೀಡಿದ್ದಾಯಿತು.. ಈಗ ಖುದ್ದು ಎಐಸಿಸಿ ಅಧ್ಯಕ್ಷರೇ ರಾಜ್ಯ ದಿವಾಳಿ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಂತೂ ಕಾಂಗ್ರೆಸ್ ನಾಯಕರಿಗೆ ತಡವಾಗಿ ಆದರೂ ಜ್ಞಾನೋದಯ ಆಗುತ್ತಿದೆ ಎಂದರು.
ರಾಜ್ಯದ ಬಜೆಟ್ ಗಾತ್ರ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕು. ಅರ್ಥ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯ ಹಾಳಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲಾಗಲ್ಲ ಎಂಬ ಖರ್ಗೆ ಅವರ ಮಾತು ಗ್ಯಾರಂಟಿಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿವೆ ಎಂಬುದನ್ನು ಸಾರಿ ಹೇಳುವಂತಿದೆ ಎಂದರು.
ಚುನಾವಣೆ ಎದುರಿಸುವ ಆವೇಶದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಸಾಕಾಗಿ ಹೋಗಿದೆ ಎಂದು ಟೀಕಿಸಿದರು. </p><p>ಗ್ಯಾರಂಟಿಗಳಿಂದ ಕರ್ನಾಟಕದ ಸ್ಥಿತಿಗತಿ ಬಗ್ಗೆ ಅರಿತ ಕಾಂಗ್ರೆಸ್, ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಕರ್ನಾಟಕವನ್ನು ಮಾದರಿಯಾಗಿ ಅನುಸರಿಸಲು ಹಿಂಜರಿಯುತ್ತಿದೆ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.