ಕಾರವಾರ: ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದ್ದು, ಅದು ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಪ್ರಮುಖರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಎದುರು ಮೆರವಣಿಗೆ ನಡೆಸಿ, ಪ್ರತಿಭಟನಾ ಸಭೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪ್ರಮುಖ ಪ್ರಸನ್ನ ಕೆರೆಕೈ, ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂದು ಎಂಬ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಲಾಗಿದೆ.
ಇದರಿಂದ ರೈತರು ಮತ್ತೆ ಎಪಿಎಂಸಿಗಳ ದಲ್ಲಾಳಿಗಳ ಕೈಯ್ಯಲ್ಲಿ ನಲುಗಬೇಕಿದೆ.
ಇದನ್ನೂ ಓದಿ: ಹೊಲನಗದ್ದೆ ಗ್ರಾಪಂಗೆ ಎಂ.ಎಂ. ಹೆಗಡೆ ಚೇರ್ಮನ್
ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು. ಇದರಿಂದ ಹತ್ತಿ ಉದ್ಯಮ, ರೈಸ್ ಮಿಲ್ ಮುಂತಾದ ಕೃಷಿ ಸಂಬಂಧಿತ ಕೈಗಾರಿಕೆಗಳಿಗೆ ದೊಡ್ಡ ತೊಂದರೆಯಾಗಿದೆ.
11 ಲಕ್ಷ ರೈತರ ಮಕ್ಕಳಿಗೆ ನೀಡುತ್ತಿದ್ದ ರೈತ ವಿದ್ಯಾ ನಿಧಿಯನ್ನು ಬಂದ್ ಮಾಡಲಾಗಿದೆ.
ಜಿಲ್ಲೆಗೊಂದು ಗೋಶಾಲೆ, ಭೂ ಸಿರಿ, ಕಿಸಾನ್ ಸಮ್ಮಾನ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಮುಂತಾದ ಯೋಜನೆಗಳಿಗೆ ಅವಕಾಶ ನೀಡಿಲ್ಲ ಎಂದು ದೂರಿದರು.
ಇದೊಂದು ಕಮೀಷನ್ ಏಜೆಂಟ್ ಸರ್ಕಾರವಾಗಿದೆ. ರೈತರು ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಕೃಷಿ ಸಚಿವರು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ.
ಇದೊಂದು ದಲಾಲಿಗಳ ಆಡಳಿತವಾಗಿದೆ ಎಂದು ದೂರಿದರು.
ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಹಿಂದೆ 40 ಪರ್ಸೆಂಟ್ ಸರ್ಕಾರ ಎಂದು ದೂರಿದ್ದ ಗುತ್ತಿಗೆದಾರರು ಈಗ ಎಲ್ಲಿ ಹೋದರು.
ಈ ಸರ್ಕಾರದಲ್ಲೂ ಗುತ್ತಿಗೆ ಹಣ ಸಿಗದೇ ಕಂಗಾಲಾಗಿದ್ದಾರೆ. ಆರೋಪ ಮಾಡುವ ಮುನ್ನ ಯೋಚಿಸಬೆಕು ಎಂದರು.
ಎಂಎಲ್‌ಸಿ ಗಣಪತಿ ಉಳ್ವೇಕರ್, ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹನ ವಿನಿಯೋಗಿಸುತ್ತಿದೆ.
ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ರೈತರಲ್ಲಿ ಯಾವುದೇ ಜಾತಿ ಧರ್ಮ ಇಲ್ಲ. ಎಲ್ಲರೂ ಅನ್ನದಾತರು.
ಬಿಜೆಪಿ ಸರ್ವರನ್ನು ಒಂದೇ ರೀತಿ ಕಂಡು ಯೋಜನೆ ಜಾರಿಗೆ ತಂದಿತ್ತು.ಆದರೆ, ಈಗಿನ ಸರ್ಕಾರ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ.
3 ತಿಂಗಳಲ್ಲಿ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ರೈತ ಮೋರ್ಚಾ ಅಧ್ಯಕ್ಷ ಮಹೇಶ ಹೊಸಕೊಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಎನ್.ಎಸ್.ಹೆಗಡೆ, ರಾಜೇಂದ್ರ ನಾಯ್ಕ ಇತರರು ಇದ್ದರು.