ಹುಬ್ಬಳ್ಳಿ : ರೈತರೂ ಸೇರಿದಂತೆ ನಾಡಿನ ಜನರ ಬೇಕು, ಬೇಡಗಳಿಗೆ ಸ್ಪಂದಿಸದೆ ಸಾಲು ಸಾಲು ಹಗರಣಗಳಲ್ಲಿ ತೊಡಗಿರುವ ಕಾಂಗ್ರೆಸ್ ಅಧಿಕಾರದಲ್ಲಿರುವುದು ನಾಡಿಗೆ ಅಪಾಯಕಾರಿ. ಮುಖ್ಯಮಂತ್ರಿ ಈಗಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವಿಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಅವರಿಗೆ ರೈತರು ಕೊಟ್ಟಿರುವ ಮನವಿಪತ್ರಗಳು ಕಸದಬುಟ್ಟಿ ಸೇರುತ್ತಿವೆ ಎಂದರೆ ಅಪಾಯಕಾರಿ ಬೆಳವಣಿಗೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 10ರಂದು ಚಾಮರಾಜ ನಗರದಲ್ಲಿ ಅಭಿನಂದನಾ ಸಮಾರಂಭಕ್ಕೆ ತೆರಳಿದ್ದಾಗ ಅಲ್ಲಿನ ರೈತರು ಜ್ವಲಂತ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದರು. ಇದೀಗ, ಆ ಎಲ್ಲ ಮನವಿ ಪತ್ರಗಳು ಕಸದ ಬುಟ್ಟಿ ಸೇರಿವೆ ಎಂಬ ಬಗ್ಗೆ ವರದಿಯಾಗಿದೆ. ನಿಜಕ್ಕೂ ಇದು ರೈತ ಸಮೂಹದ ಶೋಷಣೆ ಧೋರಣೆಯನ್ನು ತೋರುತ್ತದೆ ಎಂದು ಜೋಶಿ ಆರೋಪಿಸಿದ್ದಾರೆ.
ನಾಡಿನ ಸಮಸ್ತ ರೈತರ ಪರವಾಗಿ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ನೀಡಿದ್ದ ಮನವಿ ಪತ್ರ ಈಗ ಕಸದ ಬುಟ್ಟಿ ಸೇರಿರುವುದು ಸಿದ್ಧರಾಮಯ್ಯನವರ ನಿರ್ಲಕ್ಷ್ಯ ಪರಮಾವಧಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಗೆ ನಿಜವಾಗಿ ಯಾರ ಬಗ್ಗೆಯೂ ಕಾಳಜಿ ಇಲ್ಲ. ಹಾಗಾಗಿ ದೇಶಾದ್ಯಂತ ಕಾಂಗ್ರೆಸ್ ಬಲ ಕ್ಷೀಣಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಹ ಕಾಂಗ್ರೆಸ್ ಗೆ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ.