ಜಿಲ್ಲೆ

ಕಾಂಗ್ರೆಸ್ ಉಸ್ತುವಾರಿ ಭೇಟಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಜಿಲ್ಲೆಗೆ ಕೆಪಿಸಿಸಿಯಿಂದ ನೂತನವಾಗಿ ಉಸ್ತುವಾರಿಯಾಗಿ ನೇಮಕವಾಗಿರುವ  ಡಿ.ಕೆ. ಬ್ರಿಜೇಶ್  ಗುರುವಾರ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಇವರನ್ನು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸ್ವಾಗತಿಸಿದರು.

ನಂತರ ನಡೆದ ಸಭೆಯಲ್ಲಿ ಮಾತನಾಡಿದ ಬ್ರಿಜೇಶ್, ಬೂತ್ ಮಟ್ಟದಿಂದಲೇ ಪಕ್ಷವನ್ನು ಜಿಲ್ಲೆಯಲ್ಲಿ ಅಗತ್ಯ ಇರುವ ಕಡೆಗಳಲೆಲ್ಲಾ ಪುನರ್ ರಚಿಸಿ ಪಕ್ಷವನ್ನು ಮತ್ತಷ್ಟು ಬಲಿಷ್ಠ ಗೊಳಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಬರುವಂಥ ಎಲ್ಲಾ ಚುನಾವಣೆಗಳಲ್ಲೂ ಮೇಲುಗೈ ಸಾಧಿಸುವಲ್ಲಿ ಶ್ರಮ ವಹಿಸಬೇಕು. ಪಕ್ಷದ ಹೈಕಮಾಂಡ್‌ನಿಂದ ಕೊಡಗು ಜಿಲ್ಲಾ ಕಾಂಗ್ರೆಸ್ ಗೆ ಬೇಕಾದ ಎಲ್ಲಾ ಸಹಕಾರ ನೀಡುವುದರೊಂದಿಗೆ ಪಕ್ಷದ ಸಂಘಟನೆಯಲ್ಲಿ ತಾವು ಕೂಡ ಭಾಗಿಯಾಗುವುದಾಗಿ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಪಕ್ಷದ ಶಿಷ್ಟಾಚಾರವನ್ನು ಯಾರೂ ಉಲ್ಲಂಘಿಸಬಾರದು. ಪಕ್ಷದಲ್ಲಿ ಯಾವುದೇ ರೀತಿಯ ಬೆಳವಣಿಗೆ ಆದರೂ ಪಕ್ಷದ ಜಿಲ್ಲಾಧ್ಯಕ್ಷರ ಗಮನಕ್ಕೆ ತರಬೇಕೆಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಜಿಲ್ಲಾ ಕಾಂಗ್ರೆಸ್‌ನ ಪ್ರಮುಖ ನಾಯಕರು, ಡಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಚುನಾಯಿತ ಜನಪ್ರತಿನಿಧಿಗಳು ಮತ್ತು ನಾಮನಿರ್ದೇಶಿತ ಪ್ರಮುಖರು ಸಭೆಯಲ್ಲಿ  ಭಾಗವಹಿಸಿದ್ದರು.