ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗೂ ಸಚಿವರಾಗಿ ಸತೀಶ ಜಾರಕಿಹೊಳಿ ಪ್ರಮಾಣ ಸ್ವೀಕರಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ನೂತನ ಸರ್ಕಾರವು ನಾಡಿನ ನೆಲ, ಜಲ, ಭಾಷೆಗೆ ಹೆಚ್ಚಿನ ಆದ್ಯತೆ ನೀಡುವುದರ ಜತೆಗೆ ಬಡವರ ಪರವಾಗಿ ಒಳ್ಳೆಯ ಆಡಳಿತ ನೀಡಲಿದೆ. ಸತೀಶ ಜಾರಕಿಹೊಳಿ ಅವರು ಸಚಿವರಾಗುತ್ತಿರುವುದು ಬೆಳಗಾವಿಗರಿಗೆ ಹೆಮ್ಮೆಯ ವಿಷಯವಾಗಿದೆ. ಪಕ್ಷ ಸಂಘಟನೆಯ ಜತೆಗೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಬಾಯಿಸಲಿದ್ದಾರೆ. ಜನರ ಬೇಡಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಒಳ್ಳೆಯ ಆಡಳಿತ ನೀಡುವ ಮೂಲಕ ಮುಂಬರುವ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅಲ್ಲದೆ, ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದರು.
ಬಲರಾಮ ಮಾಸೇನಟ್ಟಿ, ಆನಂದ ಶಿರೂರ, ಚೇತನ ಪೂಜಾರಿ, ಅಮಿತ್ ರಜಪೂತ, ರಾಜು ಕ್ಯಾರಕಟ್ಟಿ, ದೀಪಕ ಕಾಮಕರ್ ಇತರರಿದ್ದರು.