ಜಿಲ್ಲೆ

ನಾಳೆ ಬೆಳಗಾವಿಯಲ್ಲಿ  ಕಾಂಗ್ರೆಸ್ ವಿಜಯೋತ್ಸವ ರ‌್ಯಾಲಿ

ಮಂಜುನಾಥ ಕೋಳಿಗುಡ್ಡ


ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನೂತನ ಸಚಿವರಾಗಿ ಜಿಲ್ಲೆಗೆ ಆಗಮಿಸುತ್ತಿರುವ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೇ 28ರಂದು ಬೆಳಗಾವಿ  ಜಿಲ್ಲೆಗೆ ಬರುತ್ತಿರುವ ಲೋಕೋಪಯೋಗಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪಕ್ಷದ ನಾಯಕರು ಸ್ವಾಗತಿಸಿಕೊಳ್ಳಲಿದ್ದಾರೆ ಎಂದರು.
 ಮೇ 28ರಂದು ಸಂಜೆ 4 ಗಂಟೆಗೆ ಸಚಿವರು, ಶಾಸಕರು ಒಳಗೊಂಡಿರುವ ತೆರೆದ ವಾಹನದ ಬೃಹತ್ ವಿಜಯೋತ್ಸವ ಮೆರವಣಿಗೆ ೆ ಕಾಂಗ್ರೆಸ್ ಭವನದಿಂದ  ಆರಂಭಗೊಂಡು ಕೊಲ್ಲಾಪುರ ವೃತ್ತ, ಅಂಬೇಡ್ಕರ್ ಉದ್ಯಾನವನದಲ್ಲಿ  ಅಂಬೇಡ್ಕರ್ ಪ್ರತಿಮೆಗೆ, ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪ್ರತಿಮೆಗೆ, ಬೋಗಾರವೇಸ್‌ನಲ್ಲಿ ಸಂಭಾಜಿ ಪ್ರತಿಮೆಗೆ ಮಾರ್ಲಾಪಣೆ ಮಾಡಲಿದ್ದಾರೆ. ಬಳಿಕ ವೀರಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೈಲ್ವೆ ಮೂರನೇ ಗೇಟ್ ಮೂಲಕ ಗೋವಾವಸೇಸ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ತದನಂತರ ಶಿವಾಜಿ ಉದ್ಯಾನವನದ ಮಾರ್ಗವಾಗಿ ಪ್ರವಾಸಿ ಮಂದಿರದಲ್ಲಿದಲ್ಲಿ  ಮುಗಿಯಲಿದೆ ಎಂದು ತಿಳಿಸಿದರು.
ಬೆಳಗಾವಿ ಉತ್ತರ, ಗ್ರಾಮೀಣ, ಯಮಕನಮರಡಿ, ಖಾನಾಪುರ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಬರಲಿದ್ದಾರೆ. ಸುಮಾರು 5 ಸಾವಿರ ಬೈಕ್ ರ‌್ಯಾಲಿ ನಡೆಯಲಿದೆ. ಬಳಿಕ  ನೂತನ ಸಚಿವರು, ಶಾಸಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ವಿಜಯೋತ್ಸವ ಮೆರವಣಿಗೆಯಲ್ಲಿ ಬರೋಬ್ಬರಿ 10 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪ್ರದೀಪ್ ಎಂ.ಜೆ, ರಾಜಾಸಲೀಂ ಖಾಸಿಂ, ರಮೇಶ ಮೊಕಾಶಿ, ಬಸವರಾಜ ಸೇಗಾವಿ, ಈರಣ್ಣ ಬಿಸಿರೊಟ್ಟಿ, ರವೀಂದ್ರ ಜಿಂದಾಳೆ ಇತರರಿದ್ದರು.