ಜಿಲ್ಲೆ

ಕಾಂಗ್ರೆಸ್‌ನ ಶೂನ್ಯ ಸಮಾವೇಶ

ಬಳ್ಳಾರಿ : ರಾಜ್ಯ ಸರ್ಕಾರ ಹೊಸಪೇಟೆಯಲ್ಲಿ ಹಮ್ಮಿಕೊಂಡಿರುವ ಎರಡು ವರ್ಷದ ಸಾಧನ ಸಮಾವೇಶ ಅಲ್ಲ, ಸರ್ಕಾರದ ಶೂನ್ಯ ಸಮಾವೇಶ ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಅವಧಿಯಲ್ಲಿ ಶೇ. 40% ಆರೋಪ ಮಾಡಿದ ಕಾಂಗ್ರೆಸ್ ನಾಯಕರು ಇಂದು 60 ಪರ್ಸೆಂಟ್ ಪಡೆಯುತ್ತಿದ್ದಾರೆ. ಕೇಂದ್ರ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ. ನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದು ದುಬಾರಿ ಸಮಾವೇಶ. ತುಂಗಭದ್ರಾ ಜಲಾಶಯಕ್ಕೆ ಒಂದು ಗೇಟ್ ಅಳವಡಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಗುಡುಗಿದರು.

ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬಳ್ಳಾರಿಗೆ ಬಂದಿಲ್ಲ. ಅವರನ್ನು ಹುಡುಕಿ ಕೊಡಿ ಎಂದು ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗುವುದು. ನಗರ ಶಾಸಕರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡುವುದಾಗಿ ಹೇಳಿದ್ದರು. ಆದರೆ, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮರಳು ದಂಧೆ, ಪೊಲೀಸ್, ಆರ್‌ಟಿಒಗಳಲ್ಲಿ ಹಣವಿಲ್ಲದೇ ಏನೂ ನಡೆಯುತ್ತಿಲ್ಲ. ಬುಡಾದಲ್ಲಿ ಶೀಥಲ ಸಮರ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಬಳಿ ಹಣ ಕೀಳಲು ಸಂಚು ನಡೆಯುತ್ತಿದೆ. ಹೀಗಾಗಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಮಾತನಾಡಿ, ಯಾವ ಪುರುಷಾರ್ಥಕ್ಕಾಗಿ ಸರ್ಕಾರ ಸಮಾವೇಶ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೇ ಅನುದಾನವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆಸಿದ ಶಾಸಕರನ್ನೇ ಪಕ್ಕದಲ್ಲಿ ಇಟ್ಟುಕೊಂಡು ಇವರು ಭ್ರಷ್ಟಾಚಾರದ ಸಮಾವೇಶ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಂಸದರು ಅಧಿಕಾರಕ್ಕಾಗಿ ಹೊಡೆದಾಡಿದ್ದಾರೆ. ಬಳ್ಳಾರಿಯ ಹಿತಕ್ಕೆ ಏನೂ ಮಾಡಿಲ್ಲ. ವಿಎಸ್‌ಕೆ ವಿವಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕುಲಪತಿ , ಕುಲಸಚಿವರ ನಡುವೆ ಹೊಂದಾಣಿಕೆ ಇಲ್ಲ ಎಂದು ಆರೋಪಿಸಿದರು. ಬಿಜೆಪಿ ಮುಖಂಡರಾದ ಡಾ.ಬಿ.ಕೆ.ಸುಂದರ್, ಡಾ.ಅರುಣಾ ಕಾಮಿನೇನಿ, ಮಲ್ಲೇಶಕುಮಾರ ಇದ್ದರು.