ಜಿಲ್ಲೆ

ಖಾಸಗಿ ವೈದ್ಯಾಧಿಕಾರಿಗಳ ಸಾಥ್

Haveri

ವಿಜಯವಾಣಿ ಸುದ್ದಿಜಾಲ ಹಾವೇರಿ

ಕರೊನಾ ಸಮಯದಲ್ಲಿ ಕೆಪಿಸಿಸಿಯಿಂದ ಆಯೋಜಿಸಿರುವ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಖಾಸಗಿ ವೈದ್ಯಾಧಿಕಾರಿಗಳು ಸಾಥ್ ನೀಡಿದ್ದು, ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ತಪಾಸಣೆಗೆ ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮ ನಿರ್ವಹಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಆರ್. ಧೃವನಾರಾಯಣ ತಿಳಿಸಿದರು.

ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ಸೋಮವಾರ ಆಯೋಜಿಸಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆಯ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಗ್ರಾ.ಪಂ.ಗೆ ಇಬ್ಬರು ಕರೊನಾ ಸೇನಾನಿಗಳನ್ನು ನೇಮಿಸಿ ಅವರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ. 8,500 ಆರೋಗ್ಯ ಹಸ್ತದ ಕಿಟ್ ವಿತರಿಸಲಾಗಿದೆ. ಕರೊನಾ ನಿಯಂತ್ರಣದ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು.

ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆರಂಭದಲ್ಲಿಯೇ ಸರ್ಕಾರ ಕರೊನಾ ನಿಯಂತ್ರಣ ಕಾರ್ಯ ಮಾಡಲಿಲ್ಲ. ಪಕ್ಕದ ಕೇರಳದಲ್ಲಿ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಅಲ್ಲಿಯ ಆರೋಗ್ಯ ಸಚಿವೆ ಒಬ್ಬ ಮಹಿಳೆ. ಆದರೆ, ರಾಜ್ಯದಲ್ಲಿ ಆರೋಗ್ಯ ಸಚಿವರು ಯಾರು ಎಂಬ ಗೊಂದಲವಿದೆ. ಒಮ್ಮೆ ಸುಧಾಕರ ಅವರು ಮತ್ತೊಮ್ಮೆ ರಾಮುಲು ಅವರು ಉಸ್ತುವಾರಿ ವಹಿಸಿಕೊಳ್ಳುತ್ತಿದ್ದಾರೆ. ಮಂತ್ರಿಗಳಲ್ಲಿನ ಅಸಹಕಾರದಿಂದ ಕರೊನಾ ವೇಗವಾಗಿ ಹರಡುತ್ತಿದೆ. ಇದೇ ಸಮಯದಲ್ಲಿ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳಿಂದ ಜಿಡಿಪಿ ಕುಸಿತಕಂಡಿದೆ ಎಂದು ದೂರಿದರು.

ಆರೋಗ್ಯ ಹಸ್ತ ಸಮಿತಿ ಸಂಚಾಲಕ ಸದಾನಂದ ಡಂಗನವರ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ, ಸಂಜೀವಕುಮಾರ ನೀರಲಗಿ, ಪ್ರೇಮಾ ಪಾಟೀಲ ಇತರರಿದ್ದರು.

ಆಧಾರವಿಲ್ಲದ ಆರೋಪ ಸರಿಯಲ್ಲ: ಡ್ರಗ್ಸ್ ಮಾಫಿಯಾ ವಿಚಾರವನ್ನು ರಾಜಕೀಯ ಪ್ರೇರಿತಗೊಳಿಸಬಾರದು. ಡ್ರಗ್ಸ್ ಮಾಫಿಯಾದಲ್ಲಿ ಯಾವುದೇ ಪಕ್ಷದ ಯಾರೇ ತಪ್ಪು ಮಾಡಿದ್ದರೂ ಕಾನೂನು ಪ್ರಕಾರ ಶಿಕ್ಷಿಸಬೇಕು ಎಂಬುದು ಪಕ್ಷದ ನಿಲುವು. ನಮ್ಮ ಪಕ್ಷದ ಯಾರು ಸಹ ಜಮೀರ್ ಅಹ್ಮದ್ ಅವರನ್ನು ಬೆಂಬಲಿಸುತ್ತಿಲ್ಲ. ಕೊಲಂಬೋದ ಕ್ಯಾಸಿನೋಗೆ ಜಮೀರ್ ಹೋಗಿದ್ದರು ಅನ್ನೋ ವಿಚಾರ ದೊಡ್ಡದಾಗಿದೆ. ಕ್ಯಾಸಿನೋಗೆ ಬಹಳ ಜನ ಹೋಗ್ತಾರೆ, ಬರ್ತಾರೆ. ಆದರೆ ಅವರು ಡ್ರಗ್ಸ್ ಮಾಫಿಯಾದಲ್ಲಿ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಬೇಕಲ್ಲ. ಆಧಾರವಿಲ್ಲದ ಆರೋಪ ಮಾಡುವುದು ಸರಿಯಲ್ಲ. ಇನ್ನು ಬಂಧನಕ್ಕೊಳಗಾದ ನಟಿಯರು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿದ್ದರಲ್ಲ. ಕೆ.ಆರ್. ಪೇಟೆ, ಚಿಕ್ಕಬಳ್ಳಾಪುರದಲ್ಲಿ ಇವರನ್ನು ಕರೆದುಕೊಂಡು ಪ್ರಚಾರ ಮಾಡಿದ್ದಾರೆ. ಈಗ ನಾವು ಕರೆದಿಲ್ಲ. ಅವರೇ ಬಂದಿದ್ದರು ಎಂದು ಬಿಜೆಪಿಗರು ಬೇಜವ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್. ಧೃವನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.