ಜಿಲ್ಲೆ

'ದಲಿತರಿಗೆ ಕಾಂಗ್ರೆಸ್‌ನಿ0ದ ಅಭಿವೃದ್ಧಿ ಕಾರ್ಯಕ್ರಮಗಳಿಲ್ಲ'

ಸುನಿಲ್ ಪೊನ್ನೇಟಿ

ಮಡಿಕೇರಿ:

ದಲಿತರ ಮತಗಳನ್ನು ಪಡೆಯುವ ಕಾಂಗ್ರೆಸ್ ಅವರ ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಎಸ್.ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಣಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಸ್.ಸಿ, ಎಸ್.ಟಿ ಅನುದಾನವನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆ. ಬಿಜೆಪಿ ಕೇವಲ ಮೇಲ್ವರ್ಗದವರ ಪಕ್ಷ ಎಂಬ ತಪ್ಪು ಅಭಿಪ್ರಾಯವನ್ನು ಕಾಂಗ್ರೆಸ್ ಮೂಡಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿರುವ ಉನ್ನತ ಸ್ಥಾನಮಾನಗಳನ್ನು ಕುರಿತು ಪಕ್ಷದ ಕಾರ್ಯಕರ್ತರು ಹೆಚ್ಚು ಪ್ರಚಾರ ಮಾಡಬೇಕು. ಕೊಡಗು ಜಿಲ್ಲೆಯಲ್ಲಿರುವ 40 ಸಾವಿರ ಪರಿಶಿಷ್ಟ ಜಾತಿಯ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.

ಹಿಂದೆ ನಾನು ಮತ್ತು ಕೆ.ಜಿ. ಬೋಪಯ್ಯ ಶಾಸಕರಾಗಿದ್ದಾಗ ಇಬ್ಬರೂ ಮಡಿಕೇರಿಯಲ್ಲಿ ಸಿಗುತ್ತಿದ್ದೆವು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆವು. ಈಗಿನ ಶಾಸಕರು ವಾರಕ್ಕೆ ಎಷ್ಟು ದಿನ ಸಿಗುತ್ತಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಂ. ರವಿ ಮೊಗೇರ ಮಾತನಾಡಿ, ಬಿಜೆಪಿ ಕೊಡಗು ಜಿಲ್ಲಾ ಎಸ್.ಸಿ ಮೋರ್ಚಾದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ.
ಪ್ರಗತಿ ಬಯಸದ ಪ್ರಗತಿಪರರು, ವಿಚಾರ ಇಲ್ಲದ ವಿಚಾರವಾದಿಗಳು, ಬುದ್ದಿ ಇಲ್ಲದ ಬುದ್ದಿಜೀವಿಗಳು ಪರಿಶಿಷ್ಟ ಜಾತಿಯ ಜನರನ್ನು ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಹೇಳುತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯನ್ನು ದಲಿತ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ, ದಲಿತರಿಗೆ ಬಿಜೆಪಿ ಉನ್ನತ ಸ್ಥಾನಮಾನ ನೀಡಿದೆ.

ಹಿಂದಿನ ರಾಷ್ಟ್ರಪತಿ, ಈಗಿನ ರಾಷ್ಟ್ರಪತಿ ಮಾತ್ರವಲ್ಲ ಇನ್ನೂ ಅನೇಕ ಉನ್ನತ ಸ್ಥಾನಗಳಿಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಬಿಜೆಪಿ ನೇಮಕ ಮಾಡಿದೆ. ಆದರೆ, ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ದಲಿತರ ಪರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷವು ಬಿಜೆಪಿ ಕೊಟ್ಟಷ್ಟು ಸ್ಥಾನಮಾನ ನೀಡಿಲ್ಲ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಕಾಳಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನ ಕೊಡಲಾಗುತ್ತದೆ. ಎಲ್ಲರೂ ಪಕ್ಷಕ್ಕೆ ಸೇರ್ಪಡೆಯಾಗಿ ಗೆಲುವಿಗಾಗಿ ಶ್ರಮಿಸಬೇಕು. ಈ ಬಾರಿ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಾಯಿಸಬೇಕು ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಪ್ರಮುಖರಾದ ಪರಮೇಶ್, ಅಭಿಜಿತ್, ನಾಗೇಶ್ ಕುಂದಲ್ಪಾಡಿ ಮತ್ತಿತರರು ಇದ್ದರು.