ನಾಗಮಂಗಲ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ಉಚಿತ ಗ್ಯಾರಂಟಿ ಹೆಸರಿನಲ್ಲಿ ದ್ರೋಹ ಎಸಗುತ್ತಿದ್ದು, ಭರವಸೆಗಳನ್ನು ಈಡೇರಿಸಲು ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ಮುಖಂಡ ಎಲ್.ಎಸ್.ಚೇತನ್‌ಗೌಡ ಆರೋಪಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ನೀಡುವ ಹೆಸರಿನಲ್ಲಿ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಮಂಕುಬೂದಿ ಎರಚುತ್ತಿದೆ. ರಾಜ್ಯದ ರೈತರನ್ನು ಕಾಂಗ್ರೆಸ್ ಸರ್ಕಾರ ಬೀದಿಗೆ ತಂದು ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಕಾವೇರಿ ವಿಚಾರದಲ್ಲಿ ರೈತರಿಗೆ ನ್ಯಾಯ ಕೊಡಿಸುವಲ್ಲಿ ಸಂಪುರ್ಣ ವಿಫಲವಾಗಿದೆ. ಗ್ಯಾರಂಟಿ ಯಾಜನೆ ಜಾರಿ ನೆಪದಲ್ಲಿ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಗ್ಯಾರಂಟಿಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯದ ಜನತೆಯ ಹಿತ ಕಾಯುವಲ್ಲಿ ವಿಫಲವಾಗಿದೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಐಟಿ ದಾಳಿ ನಡೆದಿದ್ದು, ಕೋಟ್ಯಂತರ ರೂ. ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಹಣ ಜನರ ತೆರಿಗೆಯ ಹಣವಾಗಿದ್ದು, ಕಾಂಗ್ರೆಸ್ ಸರ್ಕಾರ ಪಂಚರಾಜ್ಯಗಳ ಚುನಾವಣೆಗೆ ಸಾಗಿಸಲು ಮುಂದಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ದೂರಿದರು.
ನಾಗಮಂಗಲದವರೇ ಸಚಿವರಾಗಿದ್ದರೂ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಸಚಿವರು ಕಡಿವಾಣ ಹಾಕಲು ಮನಸ್ಸು ಮಾಡಿಲ್ಲ. ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರವನ್ನು ಎಟಿಎಂನಂತೆ ಬಳಸಿಕೊಳ್ಳುತ್ತಿದ್ದು, ರಾಜ್ಯದ ಜನರಿಗೆ ವಿಷ ಉಣಿಸುತ್ತಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿಕೊಳ್ಳದಿದ್ದರೆ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಭಗವಾನ್ ವಿರುದ್ಧ ಕ್ರಮವಾಗಲಿ: ಒಕ್ಕಲಿಗ ಜನಾಂಗದ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಭಗವಾನ್ ಅವರನ್ನು ಪ್ರೊಫೆಸರ್ ಎಂದು ಕರೆಯಲು ನಮ್ಮಂತಹ ಯುವಕರಿಗೆ ನಾಚಿಕೆಯಾಗುತ್ತಿದೆ. ಒಂದು ಸಮಾಜವನ್ನು ನಿಂದಿಸಿರುವ ಭಗವಾನ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಭಗವಾನ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಸಮುದಾಯದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಎಸ್‌ಬಿಐ ಬ್ಯಾಂಕ್ ವೃತ್ತದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಟಿ.ಮರಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಶಿರೆಸ್ತೇದಾರ್ ಮಲ್ಲಿಕಾರ್ಜುನ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.
ಬಿಜೆಪಿ ತಾಲೂಕು ಅಧ್ಯಕ್ಷ ಸೋಮಶೇಖರ್, ತಾಪಂ. ಮಾಜಿ ಸದಸ್ಯ ಹೇಮರಾಜು, ವಕೀಲ ಸಿದ್ದಲಿಂಗಸ್ವಾಮಿ, ಮುಖಂಡರಾದ ತೊಳಲಿಮೂರ್ತಿ, ಸದಾನಂದ, ರಾಮೇಗೌಡ, ಚನ್ನಪ್ಪ, ಸೋಮಶೇಖರ, ಪಾಳ್ಯರಘು, ಉಮೇಶ್, ಚೇತನ್ ಇತರರು ಇದ್ದರು.