ಶೃಂಗೇರಿ: ಮಹಿಳೆಯರ ಸಬಲತೆಗೆ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳು ಅತ್ಯಂತ ಪೂರಕವಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಇನ್ನೂ ನೋಂದಾಯಿಸಿಕೊಳ್ಳದ ಲಾನುಭವಿಗಳು ಕೂಡಲೇ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಸರ್ಕಾರದ ಉಚಿತ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳ ಲಾಭವನ್ನು ಜನಸಾಮಾನ್ಯರು ಪಡೆದುಕೊಳ್ಳ ಬೇಕು. ಸಮಾಜದ ಕಟ್ಟಕಡೆ ಜನತೆಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಗುರುತರ ಜವಾಬ್ದಾರಿ ಸಂಬಂಧಪಟ್ಟ ಇಲಾಖೆ ಮೇಲಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಕಾಮಗಾರಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರಸ್ತುತ 25 ಕೋಟಿ ರೂ. ಮೊತ್ತದ ಕಾಮಗಾರಿಗೆ ಆಡಾಳಿತಾತ್ಮಕ ಮಂಜೂರಾತಿ ದೊರೆತಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು.ರಸ್ತೆಗಳ ದುರಸ್ತಿ, ನೂರು ಅಸ್ಪತ್ರೆ ಬೆಡ್ ಹಾಗೂ ಬಸ್ ಡಿಪೋ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಐದು ಗ್ಯಾರಂಟಿಗಳ ಯೋಜನೆ ಮನೆ-ಮನೆಗೂ ತಲುಪುತ್ತಿದ್ದು, ಜನರ ಅರ್ಥಿಕ ಸ್ವಾವಲಂಬನೆಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ. ತಾಲೂಕಿನ ಗ್ರಾಮೀಣರಸ್ತೆ ಅಭಿವೃದ್ಧಿಗಾಗಿ ಸರ್ಕಾರದ ಅನುದಾನ ಮೀಸಲಾಗಿಟ್ಟಿದೆ. ಮಲೆನಾಡಿನ ಜಲ್ವಂತ ಸಮಸ್ಯೆಗಳಾದ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ ಹಾಗೂ ರೈತರ ಒತ್ತುವರಿ ಸಮಸ್ಯೆಗಳನ್ನು ನಿವಾರಿಸಲು ಕಾಳಜಿ ವಹಿಸಲಾಗುವುದು ಎಂದು ಹೇಳಿದರು.
ಮುಂದಿನ ಎರಡು ವರ್ಷಗಳ ಒಳಗೆ ಬಸ್‌ಡಿಪೋ ಮಾಡಿ ಎಲ್ಲ ಭಾಗಗಳಿಗೂ ಸರ್ಕಾರಿ ಬಸ್ ಸೇವೆ ಪ್ರಾರಂಭಿಸಲಾಗುವುದು. ಕೇಂದ್ರ ಸರ್ಕಾರಕ್ಕೆ ಹೆಚ್ಚು ತೆರಿಗೆ ಸಲ್ಲಿಸುವ ಸ್ಥಾನದಲ್ಲಿ ರಾಜ್ಯಸರ್ಕಾರ ಎರಡನೇ ಸ್ಥಾನದಲ್ಲಿದೆ. ನಾವು ನೀಡಿದ ತೆರಿಗೆಯಲ್ಲಿ ಒಂದಷ್ಟು ಅನುದಾನಗಳನ್ನು ನಮಗೆ ನೀಡಿದ್ದರೆ ರಾಜ್ಯದ ಅಭಿವೃದ್ಧಿ ಮತ್ತಷ್ಟು ಹೆಚ್ಚಾಗಲಿದೆ ಎಂದರು.