ಜಿಲ್ಲೆ

ಗ್ಯಾರಂಟಿ ಜಾರಿಯಿಂದ ರಾಜ್ಯದ ಜಿಡಿಪಿ ಹೆಚ್ಚಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

ಬೆಳಗಾವಿ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಂದು ಕುಟುಂಬಕ್ಕೆ ಐದು ಸಾವಿರ ರೂಪಾಯಿ ಲಭಿಸುತ್ತಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದರಿಂದ ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಶುಕ್ರವಾರ ಸಮಾರಂಭದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆಗೊಳಿಸಿ ವಿವಿಧ ಅಭಿವೃದ್ಧಿ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಇದುವರೆಗೆ 35 ಕೋಟಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಸರ್ಕಾರದ ಆದಾಯ ಕೂಡ ಹೆಚ್ಚಾಗಲಿದೆ. ರಾಜ್ಯದ 1.30 ಕೋಟಿಗೂ ಅಧಿಕ ಕುಟುಂಬಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ದೇಶದಲ್ಲೇ ಅಪರೂಪದ ಯೋಜನೆಯಾಗಿದ್ದು,  ವರ್ಷಕ್ಕೆ 35 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು ಎಂದರು.

ಗ್ಯಾರಂಟಿ ಅನುಷ್ಠಾನ ಸೇರಿದಂತೆ ಸರ್ಕಾರದ ಸಾಧನೆಯು ವಿರೋಧ ಪಕ್ಷವನ್ನು ಕಂಗೆಡಿಸಿದೆ. ಏನೇ ಆದರೂ ಸರ್ಕಾರ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು. ಚುನಾವಣಾ ಸಂದರ್ಭದಲ್ಲಿ ನೀಡಲಾದ ಪ್ರತಿಯೊಂದು ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಕಳೆದ ಬಾರಿ 165 ಭರವಸೆಗಳ ಪೈಕಿ 158 ಈಡೇರಿಸಲಾಗಿದೆ. ಅದೇ ರೀತಿ ಈ ಸಲ ನೀಡಲಾಗಿರುವ ಐದು ಗ್ಯಾರಂಟಿ
ಇತ್ತೀಚಿನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಲಾದ 76 ಭರವಸೆಗಳನ್ನು ಈಡೇರಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಈಗಾಗಲೇ ಈಡೇರಿಸಲಾಗಿದೆ. ಗೃಹಲಕ್ಷ್ಮೀ ಈ ತಿಂಗಳಲ್ಲೇ ತರಲಾಗುತ್ತಿದ್ದು, ಐದನೇ ಗ್ಯಾರಂಟಿ ಯುವ ನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೊಳಿಸಲಾಗುವುದು ಎಂದರು.

ಇದಕ್ಕೂ ಮುಂಚೆ ಅಥಣಿಯ ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲಾಗಿರುವ ಜಗಜ್ಯೋತಿ ಶ್ರೀಬಸವೇಶ್ವರರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್,  ಸಚಿವರಾದ ಸತೀಶ ಜಾಕಿಹೊಳಿ, ಎನ್.ಎಸ್.ಭೋಸರಾಜು, ರಾಮಲಿಂಗಾರೆಡ್ಡಿ, ಸರ್ಕಾರದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಭರಮಗೌಡ ಕಾಗೆ, ವಿಶ್ವಾಸ ವೈದ್ಯ, ಜೆ.ಟಿ.ಪಾಟೀಲ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ ಇತರರಿದ್ದರು.


ನೀರು ವಿನಿಮಯ ಒಪ್ಪಂದಕ್ಕೆ ಜಾರಕಿಹೊಳಿ ಮನವಿ
ಮಹಾರಾಷ್ಟಕ್ಕೆ ಮಳೆಗಾಲದಲ್ಲಿ ನಾಲ್ಕು ಟಿ.ಎಂ.ಸಿ.ನೀಡಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಮಹಾರಾಷ್ಟ್ರದಿಂದ ನಮ್ಮ ರಾಜ್ಯಕ್ಕೆ ನಾಲ್ಕು ಟಿ.ಎಂ.ಸಿ. ನೀರು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸರ್ಕಾರ ಮುಂದಾಗಬೇಕು. ಈ ರೀತಿಯ ಒಪ್ಪಂದದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.