ರಾಜ್ಯ ಸರ್ಕಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ಅದರ ಫಲ ಸಿಗುವಂತೆ ನೋಡಿಕೊಳ್ಳುವ ಪ್ರಯತ್ನದ ಭಾಗವಾಗಿ ಆಡಳಿತ ಯಂತ್ರ ಹೊಸ ಪ್ರಯತ್ನವೊಂದಕ್ಕೆ ಮುಂದಾಗಿದೆ.
ರಾಜ್ಯದ ಮಟ್ಟಿಗೆ ಹೊಸ ರೀತಿಯ ಪ್ರಯತ್ನವನ್ನು ಮಾಡಲು ಸರ್ಕಾರ ಮುಂದಾಗಿದೆ. ಜನರ ಸಮಸ್ಯೆಗಳ ಆಲಿಕೆ, ಸರ್ಕಾರದ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹ, ಸರ್ಕಾರ ಸಾಗಬೇಕಾದ ದಿಕ್ಕಿನ ಬಗ್ಗೆ ಜನರಲ್ಲಿರುವ ಆಲೋಚನೆಗಳ ಲಾಭ ಪಡೆಯುವುದು ಒಟ್ಟಾರೆ ಉದ್ದೇಶವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ, ಮುಖ್ಯಮಂತ್ರಿ ರಾಜ್ಯಮಟ್ಟದಲ್ಲಿ ನಡೆಸಿದ ಜನಸ್ಪಂದನದ ಮುಂದುವರಿದ ಭಾಗದ ರೂಪದಲ್ಲಿ ಜನರ ಬಳಿಗೆ ಸರ್ಕಾರ ತೆಗೆದುಕೊಂಡು ಹೋಗುವ ಪ್ರಯತ್ನ ಇರುತ್ತದೆ. ಆದರೆ ಅದಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಮುಖ್ಯಮಂತ್ರಿ ಹಲವು ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಜನರಿಂದ ಮನವಿಗಳನ್ನು ಸ್ವೀಕರಿಸಿದ್ದಾರೆ. ಅದು ಕೇವಲ ಔಪಚಾರಿಕವಾಗಿ ನಡೆದಿದೆ ಹೊರತು ಜನರೊಂದಿಗೆ ಮುಖಾಮುಖಿಯಾಗಿಲ್ಲ.
ಸರ್ಕಾರ ಕೇವಲ ಗ್ಯಾರಂಟಿಗಳಲ್ಲಿ ಮುಳುಗಿದೆ ಎಂಬ ಟೀಕೆಗಳಿವೆ. ಜಿಲ್ಲೆಗೆ ಯಾವ ಇಲಾಖೆಯಿಂದ ಏನು ಬೇಕು ಎಂಬುದನ್ನು ಅಲ್ಲಿನ ಜನರಿಂದಲೇ ತಿಳಿದು ಮುಂದಿನ ಬಜೆಟ್ಗೆ ಸೇರಿಸುವುದು ಇದರ ಉದ್ದೇಶವಾಗಿದೆ.
ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಅಧಿಕಾರಿಗಳ ತಂಡ ಒಂದು ಸುತ್ತಿನ ಮಾತುಕತೆ ನಡೆಸಿದೆ. ಈ ಹೊಸ ಆಲೋಚನೆಯಿಂದ ಪ್ರಭಾವಿತರಾಗಿರುವ ಸಿಎಂ ಈ ಬಗ್ಗೆ ಕಾರ್ಯಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ. ಕಳೆದ ಸಚಿವ ಸಂಪುಟ ಸಭೆಯಲ್ಲಿಯೂ ಸಚಿವರೊಂದಿಗೆ ಈ ಬಗ್ಗೆ ಸಿಎಂ ಮಾತನಾಡಿದ್ದಾರೆ.
ಕಾರ್ಯಕ್ರಮದ ಸ್ವರೂಪವೇನು: ಮುಖ್ಯಮಂತ್ರಿ ಸಹಿತ ಸಂಪುಟದ 34 ಜನ ಸದಸ್ಯರು ಜಿಲ್ಲಾ ಕೇಂದ್ರಕ್ಕೆ ಹೋಗಲಿದ್ದಾರೆ. ಒಂದು ಸಭಾಂಗಣದಲ್ಲಿ ಪ್ರತಿ ಸಚಿವರಿಗೆ ಒಂದು ಪ್ರತ್ಯೇಕ ಟೇಬಲ್ಗಳನ್ನು ಹಾಕಲಾಗುತ್ತದೆ. ಜಿಲ್ಲೆಯ ಆಯ್ದ ಜನರೊಂದಿಗೆ ಸಚಿವರು ಚರ್ಚೆ ಮಾಡಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ತಂಡದೊಂದಿಗೆ ಮುಖ್ಯಮಂತ್ರಿ ಚರ್ಚೆ ಮಾಡಲಿದ್ದಾರೆ. ಜಿಲ್ಲೆಗೆ ಯಾವ ಯಾವ ಇಲಾಖೆಗಳಿಂದ ಏನೇನು ಅಗಬೇಕು ಎಂಬುದರ ಬಗ್ಗೆ ಸಚಿವರು ಮಾಹಿತಿ ಪಡೆಯಲಿದ್ದಾರೆ.
ಸಂವಾದಕ್ಕೆ ಆಯ್ಕೆಯಾದ ತಂಡವನ್ನು ಹೊರತುಪಡಿಸಿ ಇನ್ನುಳಿದ ಯಾರೊಬ್ಬರಿಗೂ ಸಂವಾದದ ಸ್ಥಳಕ್ಕೆ ಅವಕಾಶ ಇರುವುದಿಲ್ಲ. ಮುಖ್ಯಮಂತ್ರಿ ಜತೆ ಸಂವಾದದಲ್ಲಿ ಮುಖ್ಯ ಕಾರ್ಯದರ್ಶಿ ಉಪಸ್ಥಿತರಿರುತ್ತಾರೆ. ಅವರನ್ನು ಹೊರತುಪಡಿಸಿ ಇನ್ನುಳಿದ ಅಧಿಕಾರಿಗಳು ಇರುವುದಿಲ್ಲ. ಕಾರ್ಯಕರ್ತರ ಗುಂಪನ್ನು ಸಹ ಸೇರಿಸಬಾರದೆಂದು ನಿರ್ಧರಿಸಲಾಗಿದೆ.
ಯಾವಾಗ ನಡೆಯಬಹುದು: ಈ ರೀತಿಯ ಜನರ ಬಳಿಗೆ ಸರ್ಕಾರ ಕಾರ್ಯಕ್ರಮವನ್ನು ಬಜೆಟ್ ಅಧಿವೇಶನಕ್ಕೆ ಮುನ್ನವೇ ಆರಂಭಿಸಬೇಕು ಎಂಬುದು ಈಗ ನಡೆದಿರುವ ಚರ್ಚೆ. ಕಾರ್ಯಕ್ರಮದ ಒಟ್ಟಾರೆ ಸ್ವರೂಪ ಅಂತಿಮ ಆಗುತ್ತಿದ್ದಂತೆ ದಿನಾಂಕ ಸಹ ತೀರ್ವನವಾಗಲಿದೆ.
ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರತಿ ಕಂದಾಯ ವಿಭಾಗದ ತಲಾ ಎರಡು ಜಿಲ್ಲೆಗಳಲ್ಲಿ ನಡೆಸುವ ಉದ್ದೇಶವನ್ನು ಹೊಂದಲಾಗಿದೆ. ಗಡಿ ಜಿಲ್ಲೆ ಬೀದರ್ನಿಂದ ಆರಂಭಿಸಬೇಕು ಎಂಬುದು ಈ ಸದ್ಯ ನಡೆದಿರುವ ಚರ್ಚೆಯಾಗಿದೆ. ಬಜೆಟ್ ಅಧಿವೇಶನ ಮುಗಿದ ನಂತರ ಎಲ್ಲ 31 ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುತ್ತದೆ. ಲೋಕಸಭಾ ಚುನಾವಣೆ ಅಧಿಸೂಚನೆ ಪ್ರಕಟವಾಗುವುದರೊಳಗೆ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರದ ಕಾರ್ಯಕ್ರಮ ನಡೆಸಲಾಗುತ್ತದೆ. ಚುನಾವಣಾ ಅಧಿಸೂಚನೆ ಪ್ರಕಟವಾದ ನಂತರ ರಾಜಕೀಯ ಸಭೆ, ರ್ಯಾಲಿ, ಸಮಾರಂಭಗಳನ್ನು ನಿರಂತರವಾಗಿ ನಡೆಸಲಾಗುತ್ತದೆ. ಆದರೆ ಅದು ಸರ್ಕಾರದ ಕಾರ್ಯಕ್ರಮವಾಗಿರುವುದಿಲ್ಲ. ಅದಕ್ಕೂ ಮೊದಲು ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದ ಫಲವಾಗಿ ಜನರ ಬಳಿಗೆ ಸರ್ಕಾರ ನಡೆಯಲಿದೆ.
ಗ್ರಾಪಂವಾರು ಸಮಾವೇಶ: ಗ್ಯಾರಂಟಿ ಯೋಜನೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸುವುದು ಒಂದು ಕಡೆಯಾದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತ್ಯೇಕವಾದ ಸಣ್ಣ ಪ್ರಮಾಣದ ಸಮಾವೇಶಗಳನ್ನು ನಡೆಸುವ ಬಗ್ಗೆಯೂ ಚರ್ಚೆಯಾಗಿದೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಎಲ್ಲ 6 ಸಾವಿರ ಪಂಚಾಯಿತಿಗಳಲ್ಲಿ ನಡೆಸುವ ಉದ್ದೇಶವಿದೆ. ಗ್ಯಾರಂಟಿಗಳ ಫಲ ಪಡೆಯುತ್ತಿದ್ದರೂ ಸಹ ಅದನ್ನು ವಿರೋಧಿಸುವ ಸಣ್ಣ ಪ್ರಮಾಣದ ಗುಂಪು ಇರುವುದು ಸರ್ಕಾರದ ಗಮನಕ್ಕೆ ಬಂದಿದೆ, ಅಂತಹ ಜನರನ್ನು ಸೆಳೆಯುವುದು ಒಟ್ಟಾರೆ ಸಮಾವೇಶಗಳ ಉದ್ದೇಶವಾಗಿದೆ.
ಗ್ಯಾರಂಟಿ ಸಂವಾದ
ಪ್ರತಿ ಜಿಲ್ಲೆಯಲ್ಲಿಯೂ ಈ ಸಂವಾದ ಕಾರ್ಯಕ್ರಮಗಳ ಜತೆಜತೆಗೆ ಗ್ಯಾರಂಟಿ ಫಲಾನುಭವಿಗಳ ಸಮಾವೇಶಗಳನ್ನು ಸಹ ನಡೆಸಲಾಗುತ್ತದೆ. ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಫಲಪ್ರದವಾಗಿವೆ ಎಂಬುದನ್ನು ಜನರಿಗೆ ತಿಳಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸುವುದು ಒಟ್ಟಾರೆ ಇದರ ಉದ್ದೇಶವಾಗಿದೆ. ಮಧ್ಯಾಹ್ನದ ತನಕ ಸಂವಾದ ಮುಗಿಸಿ ಆ ನಂತರ ಸಮಾವೇಶಗಳಿಗೆ ಸಚಿವರ ತಂಡ ಭಾಗವಹಿಸಲಿದೆ.
ಆಯ್ಕೆ ಹೇಗೆ
ಮುಖ್ಯಮಂತ್ರಿ ಹಾಗೂ ಸಚಿವರ ಜತೆ ಸಂವಾದ ಮಾಡುವವರನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಶಾಸಕರು ಅಂತಿಮವಾಗಿ ಇಂತಿಷ್ಟು ಜನರನ್ನು ಅಂತಿಮ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಚರ್ಚೆ ನಡೆಸಿ ಸಂವಾದದ ತಂಡಗಳನ್ನು ತೀರ್ಮಾನ ಮಾಡಲಿದ್ದಾರೆ. ಬೆಳಗ್ಗೆ ತಿಂಡಿಯೊಂದಿಗೆ ಆರಂಭವಾಗಿ ಒಂದೆರಡು ಗಂಟೆಗಳ ಕಾಲ ಚರ್ಚೆಗಳು ನಡೆಯಲಿವೆ.