ಲೋಕಾಪುರ ಪಟ್ಟಣದ ಬೆಳಗಲಿ ಕಲ್ಯಾಣ ಮಂಟಪದ ವತಿಯಿಂದ ಸಂಸದ ಗೋವಿಂದ ಕಾರಜೋಳ ಅವರನ್ನು ಸನ್ಮಾನಿಸಲಾಯಿತು. ಸಂಗನಗೌಡ ಕಾತರಕಿ, ಅರುಣ ಕಾರಜೋಳ, ಲೋಕಣ್ಣ ಕತ್ತಿ, ಚಿದಾನಂದ ಬೆಳಗಲಿ, ಪ್ರಕಾಶ ಬೆಳಗಲಿ, ಕಾಶಿಲಿಂಗ ಮಾಳಿ ಇದ್ದರು. 
ಜಿಲ್ಲೆ

ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ಪತನ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಅದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಅವರ ಪಕ್ಷದ ಶಾಸಕರು ಮತ್ತು ಮಂತ್ರಿಗಳೇ ಒತ್ತಾಯಿಸಲಿದ್ದಾರೆ. ಶೀಘ್ರದಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ರೂ. ಆಮಿಷ ಆರೋಪಕ್ಕೆ ತಿರುಗೇಟು ನೀಡಿದ ಅವರು, 50 ಕೋಟಿ ರೂ. ಯಾರು ಕೊಡಲು ಬಂದಿದ್ದು? ಅವರ ಹೆಸರು ಹೇಳಲಿ. ಸರ್ಕಾರ ನಿಮ್ಮದೇ ಇದೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ. ಮುಖ್ಯಮಂತ್ರಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಡಲಿ ಎಂದರು.

ಅಬಕಾರಿ ಇಲಾಖೆಯಲ್ಲಿ ನಡೆದ 700 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಮದ್ಯದಂಗಡಿ ಅಸೋಸಿಯೇಷನ್ ಮಾಲೀಕರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸರ್ಕಾರದಿಂದಲೇ ಲೈಸೆನ್ಸ್ ಪಡೆದ ಮದ್ಯದಂಗಡಿ ಮಾಲೀಕರು ಅದರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಅದರಲ್ಲಿ ನೀವು ಭಾಗಿಯಾಗಿಲ್ಲವೆಂದರೆ ಸಾಬೀತುಪಡಿಸಿ ಎಂದು ಹೇಳಿದರು.

ಬಿಜೆಪಿ ಸರ್ಕಾರವಿದ್ದಾಗ ಗುತ್ತಿಗೆದಾರರ ಅಧ್ಯಕ್ಷ ದಿ. ಕೆಂಪಣ್ಣ ನಮ್ಮ ಸರ್ಕಾರದ ಮೇಲೆ ಶೇ. 40 ಪರ್ಸೆಂಟ್ ಆಪಾದನೆ ಮಾಡಿದ್ದರು. ಅವರು ಹೇಳಿದ ಸುಳ್ಳನ್ನೇ ರಾಜ್ಯಾದ್ಯಂತ ಹೇಳುತ್ತ ತಿರುಗಾಡಿದ್ದೀರಿ. ಇಲ್ಲಿಯವರೆಗೂ ನಿಮ್ಮ ಸರ್ಕಾರ ಅದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಬಂದು ಒಂದೂವರೆ ವರ್ಷ ಗತಿಸಿದರೂ ಒಂದೇ ಒಂದು ಹೊಸ ಅಭಿವೃದ್ಧಿ ಕೆಲಸ ಮಾಡಿಲ್ಲ, ನೈಯಾಪೈಸೆ ಅನುದಾನ ಬಂದಿಲ್ಲ. ಅವರ ಪಕ್ಷದ ಶಾಸಕರೇ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ವಿಷ ಕುಡಿತಿನಿ ಅಂತಾ ಹೇಳುತ್ತಿದ್ದಾರೆ. ಇಂಥ ಪರಿಸ್ಥಿತಿ ಸಿದ್ದರಾಮಯ್ಯ ಸರ್ಕಾರಕ್ಕೆ ಬಂದಿರುವುದು ಕಳವಳಕಾರಿ ಸಂಗತಿ ಎಂದರು.

ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿಗಳನ್ನೇ ಪದೇ ಪದೆ ಉದ್ಘಾಟಿಸಿ ಶಂಕುಸ್ಥಾಪನೆ ಮಾಡಿದ್ದೀರಿ. ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನೇ ಮುಂದುವರಿಸಿಕೊಂಡು ಹೋಗುವುದೇ ನಿಮ್ಮ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ, ಮುಖಂಡರಾದ ಅರುಣ ಕಾರಜೋಳ, ರಾಜು ನಾರಾಯಣ ಯಡಹಳ್ಳಿ, ಲೋಕಣ್ಣ ಕತ್ತಿ, ಪ್ರಕಾಶ ಚಿತ್ತರಗಿ, ವಿರೇಶ ಪಂಚಕಟ್ಟಿಮಠ, ಸಿದ್ರಾಮಪ್ಪ ದೇಸಾಯಿ, ಆನಂದ ಹವಳಖೋಡ, ಸುರೇಶ ಹುಗ್ಗಿ, ಶ್ರೀಶೈಲ ಚಿನ್ನಣ್ಣವರ, ಗೋಪಾಲಗೌಡ ಪಾಟೀಲ, ಕಾಶಿಲಿಂಗ ಮಾಳಿ, ಸುರೇಶ ಬೆಳಗಲಿ, ಪ್ರಕಾಶ ಬೆಳಗಲಿ, ಚಿದಾನಂದ ಬೆಳಗಲಿ ಇತರರಿದ್ದರು.

ಲೋಕಾಪುರ ಪಟ್ಟಣಕ್ಕೆ ಡಿಗ್ರಿ ಕಾಲೇಜು ನಿರ್ಮಾಣ, ಆದರ್ಶ ವಿದ್ಯಾಲಯ, ಮುರಾರ್ಜಿ ವಸತಿ ಶಾಲೆ, ಎರಡು ಹಾಸ್ಟೆಲ್‌ಗಳು, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣ, ರಸ್ತೆ, ಕುಡಿಯುವ ನೀರಿನ ಯೋಜನೆ, ಎಲ್ಲ ಸಮುದಾಯ ಭವನಗಳಿಗೆ ಹಣ ಬಿಡುಗಡೆ, ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸಲು ಎರಡು ಬೃಹತ್ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದೇನೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. -ಗೋವಿಂದ ಎಂ. ಕಾರಜೋಳ, ಸಂಸದ